ಕಡೂರಿನಲ್ಲಿ ನಡೆದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಂ.ಜಯಮ್ಮ, ಬಿ.ಎಲ್.ಶಂಕರ್, ಕೆ.ಎಸ್.ಆನಂದ್, ವೈಎಸ್‌ವಿ ದತ್ತ, ಭಂಡಾರಿ ಶ್ರೀನಿವಾಸ್ ಮತ್ತಿತರರಿದ್ದರು.
ಕಡೂರು: ಮಾತೃಭಾಷೆ ಬೆಳೆಯಬೇಕೆಂದರೆ ಕನ್ನಡವನ್ನು ಬಳಸಬೇಕು. ಆದರೆ ಕಲಿಯಿರಿ ಎಂದು ಒತ್ತಾಯ ಮಾಡಬೇಕಾದ ದುಸ್ಥಿತಿ ನಾಡಿಗೆ ಎದುರಾಗಿರುವುದು ವಿಪರ್ಯಾಸ ಎಂದು ಚಿಂತಕ ಬಿ.ಎಲ್.ಶಂಕರ್ ಪ್ರತಿಪಾದಿಸಿದರು.
ಭಾನುವಾರ ನಡೆದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯನ್ನು ಶ್ರೀಮಂತಗೊಳಿಸುವ ಅನೇಕ ಸಮ್ಮೇಳನಗಳು ನಡೆದಿವೆ. ಆದರೆ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳು ಎಷ್ಟರಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದನ್ನು ಅವಲೋಕಿಸಿದರೆ ನಿರಾಸೆ ಕಾಡದಿರದು ಎಂದರು.
ಪ್ರಾಪಂಚಿಕ ಜ್ಞಾನ ಪಡೆಯಲು ಇಂಗ್ಲಿಷ್ ಒಂದೇ ಪ್ರಧಾನ ಎಂಬ ಭ್ರಮೆಯಿಂದ ನಾವು ಮೊದಲು ಹೊರಬರಬೇಕಿದೆ. ಪ್ರಸ್ತುತ ಎಷ್ಟೋ ದೇಶಗಳು ಇಂಗ್ಲಿಷ್ ಹಂಗಿಲ್ಲದೆ ಎಲ್ಲ ರಂಗಗಳಲ್ಲೂ ಅಭಿವೃದ್ಧಿ ಕಂಡಿವೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣದ ವ್ಯವಸ್ಥೆ ಇದೆ. ತಜ್ಞ ಶಿಕ್ಷಕರು, ಸುಸಜ್ಜಿತ ಶಾಲೆ, ಕಲಿಕೆಗೆ ಪೂರಕ ವಾತಾವರಣವಿದ್ದರೂ ಪಾಲಕರು ಮಕ್ಕಳನ್ನು ಕಾನ್ವೆಂಟ್‌ಗಳಿಗೆ ದಾಖಲಿಸುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ಸರ್ಕಾರಗಳು ಮೂಲ ಸೌಲಭ್ಯಗಳ ಮೇಲೆ ಹೂಡುವ ಸಂಪನ್ಮೂಲಗಳಿಗಿಂತಲೂ ಹಲವು ಪಟ್ಟು ಶಿಕ್ಷಣಕ್ಕೆ ನೀಡುತ್ತಿದೆ. ಶೈಕ್ಷಣಿಕ ಪ್ರಗತಿಯಾಗಲಿ ಅಥವಾ ಲಿತಾಂಶಗಳಲ್ಲಾಗಲಿ ಯಾವುದೇ ಪ್ರಯೋಜನ ಕಂಡುಬಾರದಿರುವುದು ನೋವಿನ ಸಂಗತಿ. ವಿಶ್ವದಲ್ಲಿ ಇಂದಿಗೂ ಜೀವಂತವಿರುವ ಮತ್ತು ಜನಬಳಕೆಯಲ್ಲಿರುವ 20 ಭಾಷೆಗಳ ಪೈಕಿ ಕನ್ನಡವೂ ಒಂದು ಎಂಬುದನ್ನು ಗಮನಿಸಬಹುದು. ಅಲ್ಲದೇ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡದ ಸಾಹಿತ್ಯ, ಸಂಸ್ಕೃತಿ ಭಾಷಾ ಪ್ರಭಾವ ಉದ್ದೀಪನಗೊಳಿಸಿದ ಅನೇಕ ಮಹನೀಯರು ಕನ್ನಡ ನುಡಿಪರಿಚಾರಕರಾಗಿ ಶ್ರೇಷ್ಠತೆ ಮೆರೆದ ಪರಿಣಾಮವಾಗಿ 8 ಜ್ಞಾನಪೀಠ ಮತ್ತು ಎರಡು ಸರಸ್ವತಿ ಸಮ್ಮಾನ್ ಪ್ರಶಸ್ತಿಗಳು ನಮ್ಮ ಕನ್ನಡಕ್ಕೆ ಭಾಜನವಾಗಿರುವುದು ಪ್ರತಿಯೊಬ್ಬ ಕನ್ನಡಿಗ ಗರ್ವ ಪಡಬೇಕಾದ ಸಂಗತಿ ಎಂದರು.
ವಿವಿಧ ಕ್ಷೇತ್ರಗಳ ಸಾಧಕರಿಗೆ ಕನ್ನಡಸಿರಿ, ಕನ್ನಡ ಶ್ರೀ ಸೇರಿದಂತೆ ವೃತ್ತಿ ಪುರಸ್ಕೃತ ಸಾಧಕರಿಗೆ ಗೌರವಿಸಲಾಯಿತು. ಸಮ್ಮೇಳನಾಧ್ಯಕ್ಷೆ ಎಂ.ಜಯಮ್ಮ, ಶಾಸಕರಾದ ಕೆ.ಎಸ್.ಆನಂದ್, ಜಿ.ಎಚ್.ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಎ.ಸಿ.ಚಂದ್ರಪ್ಪ, ದೊಣ್ಣೇಕೋರನಹಳ್ಳಿ ಉಮೇಶ್, ಗುಮ್ಮನಹಳ್ಳಿ ಅಶೋಕ್, ಕುಂದೂರು ಅಶೋಕ್, ಎಸ್.ಎಸ್. ವೆಂಕಟೇಶ್, ಯರದಕೆರೆ ರಾಜಣ್ಣ, ಕೆ.ಜಿ.ಲೋಕೇಶ್ವರ್, , ರೂಪನಾಯ್ಕ, ಇಮ್ರಾನ್ ಅಹ್ಮದ್ ಬೇಗ್, ಸೈಯದ್ ಮುಹಿಬ್‌ವುಲ್ಲ ಮತ್ತಿತರರಿದ್ದರು.