ಕಡೂರು ತಾಲೂಕಿನ ಚೌಳಹಿರಿಯೂರಲ್ಲಿ ರೈತರು ಮಳೆಗಾಗಿ ಮುಗಿಲು ನೋಡುತ್ತಿರುವುದು. 
ಚಿಕ್ಕಮಗಳೂರು

ಕಡೂರನ್ನು ಬರಪೀಡಿತ ತಾಲೂಕಾಗಿ ಘೋಷಿಸಲು ಒತ್ತಾಯ

ಚೌಳಹಿರಿಯೂರು: ಕಡೂರು ತಾಲೂಕಿನಲ್ಲಿ ಮಳೆ ಇಲ್ಲದೆ ಬರ ಆವರಿಸಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ಪರಿಸ್ಥಿತಿಯನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಏಳು ನದಿಗಳು ಹರಿದರೂ ಕೃಷಿಗೆ, ಕುಡಿಯುವ ನೀರಿಗೆ ಸಮಸ್ಯೆ ತಪ್ಪಿಲ್ಲ. ಜಿಲ್ಲೆಯ ಬಯಲು ಭಾಗವಾದ ಕಡೂರು, ಅಜ್ಜಂಪುರ, ತರೀಕೆರೆ ತಾಲೂಕುಗಳಲ್ಲಿ ಐದು ವರ್ಷಗಳಿಗೊಮ್ಮೆ ಬರ ನಿಶ್ಚಿತ ಎನ್ನುವಂತಾಗಿದೆ. ಕಡೂರು ತಾಲೂಕನ್ನು 20 ವರ್ಷಗಳ ಹಿಂದೆಯೇ ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕಿನ ಪಟ್ಟಿಗೆ ಸೇರಿಸಿ ಶಾಶ್ವತ ಬರಗಾಲ ಇರುವುದನ್ನು ಅರಿತಿದ್ದರು. ನಂತರ ಆನೇಕ ಜನಪ್ರತಿನಿಧಿಗಳ, ಅವಧಿಯಲ್ಲಿ ಬರಗಾಲ ಅವರಿಸಿದ್ದರೂ ಶಾಶ್ವತ ನೀರಾವರಿ ಕಲ್ಪಿಸುವಲ್ಲಿ ವಿಲರಾಗಿದ್ದಾರೆ.
ಭದ್ರಾ ಮೇಲ್ದದಂಡೆ ಯೋಜನೆ ಅನುಷ್ಠಾನ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಹಾಗೂ ಆರ್ಥಿಕ ಸಂಕಷ್ಟ ಎದುರಾಗಿರುವುದರಿಂದ ನೀರಾವರಿ ಯೋಜನೆಗಳು ವಿಫಲವಾಗಿದೆ. ಕೇಂದ್ರ ಸರ್ಕಾರದ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ 5,340 ಕೋಟಿ ರೂ. ನೀಡುವುದಾಗಿ ತಿಳಿಸಿತ್ತು. ಆದರೆ ಇದುವರೆಗೂ ಹಣ ನೀಡದೆ ಇರುವುದು. ಕಾಮಗಾರಿ ಕುಂಠಿತಕ್ಕೆ ಮೂಲ ಕಾರಣವಾಗಿದೆ.
ಭದ್ರಾಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆ ಕಾಮಗಾರಿ ಭರದಿಂದ ಸಾಗಿದ್ದರೆ ಈ ಭಾಗದ 28 ಕೆರೆಗಳಿಗೆ ನೀರು ಹರಿಯುತ್ತಿತ್ತು. ಕನಿಷ್ಠ ಜನ-ಜಾನುವಾರುಗಳಿಗೆ ಕುಡಿಯುವ ನೀರು ದೊರೆಯುತ್ತಿತ್ತು. ಕುಕ್ಕಸಮುದ್ರ ಕೆರೆ ತುಂಬಿದರೆ ಚೌಳಹಿರಿಯೂರಿನ ಊರ ಮುಂದಿನ ಕೆರೆಗೆ ನೀರು ಹರಿಯುತ್ತದೆ. ಕುಕ್ಕಸಮುದ್ರ ಕೆರೆಗೆ ಭದ್ರಾದಿಂದ ಒಂದು ವಾರ ನೀರು ಬಿಟ್ಟರೆ ಸುತ್ತಮುತ್ತಲಿನ ಹತ್ತಾರು ಕೆರೆಗಳಿಗೆ ನೀರು ಬರಲಿದ್ದು ಜಾನುವಾರುಗಳನ್ನು ಬದುಕಿಸಿಕೊಳ್ಳಬಹುದಾಗಿದೆ. ಬಹುತೇಕ ಬೆಳೆಗಳ ಬಿತ್ತನೆ ಮಾಡದ ರೈತರು ತಲೆ ಮೇಲೆ ಕೈಹೊತ್ತು ಕುಳಿತು ಮುಗಿಲು ನೋಡುವಂತಾಗಿದೆ. ಕಳೆದ ಒಂದು ತಿಂಗಳಿಂದೆ ಭದ್ರಾನೀರು ಹರಿಸಲು ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ತಾಲೂಕಿನಲ್ಲಿ ಎಲ್ಲಿಯೂ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಶೇಂಗಾ, ಎಳ್ಳು ಬಿತ್ತನೆ ನಡೆದಿಲ್ಲ ಆಗಸ್ಟ್ ಅಂತ್ಯಕ್ಕೆ ರಾಗಿ ಬಿತ್ತನೆ ಪೂರ್ಣಗೊಳ್ಳಬೇಕು. ತಾಲೂಕಿನಲ್ಲಿ ಕನಿಷ್ಠ 43 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ನಡೆಯಬೇಕು. ಅದರೆ ಇದುವರೆಗೂ ಶೂನ್ಯ ಬಿತ್ತನೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆ ಬಂದರೆ ರಾಗಿ ಬಿತ್ತನೆ ಎನ್ನುವಂತಾಗಿದೆ.