ಎನ್.ಆರ್.ಪುರ ಗುಬ್ಬಿಗಾ, ಅರಳಿಕೊಪ್ಪ ಗ್ರಾಮಸ್ಥರು ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಮಧುಕರಗೆ ಮನವಿ ಸಲ್ಲಿಸಿದರು. ಎಚ್.ಡಿ.ಲೋಕೇಶ್, ಮನು, ಪ್ರೇಮಾ ಇತರರಿದ್ದರು.  
ಚಿಕ್ಕಮಗಳೂರು

ಕಾಡಾನೆ ಸೆರೆಹಿಡಿಯಲು ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಗುಡ್ಡಿಕೆರೆ, ಸಿದ್ಧನಕೊಡಿಗೆ, ಟಂಕಬೈಲು,
  • ಟಂಕಬೈಲು, ಕೋಡಿಗಳ್ಳ ಗ್ರಾಮಗಳಲ್ಲಿ
ಎನ್.ಆರ್.ಪುರ: ಸಿದ್ಧನಕೊಡಿಗೆಯಲ್ಲಿ ಎರಡು ದಿನದ ಹಿಂದೆ ಶಾಲೆಯ ಮಕ್ಕಳನ್ನು ಅಟ್ಟಿಸಿಕೊಂಡು ಹೋಗಿದ್ದ ಕಾಡಾನೆ ಬುಧವಾರ ಹಾಗೂ ಗುರುವಾರ ರಾತ್ರಿ ಗುಬ್ಬಿಗಾ, ಅರಳಿಕೊಪ್ಪ ಗ್ರಾಮಗಳ ತೋಟಗಳಿಗೆ ನುಗ್ಗಿ ಬಾಳೆ, ಅಡಿಕೆ, ತೆಂಗು ಹಾಗೂ ಗದ್ದೆಗಳಲ್ಲಿ ಭತ್ತದ ಸಸಿ  ತಿಂದು ನಾಶ ಮಾಡಿದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಶುಕ್ರವಾರ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಮಧುಕರ ಅವರಿಗೆ ಮನವಿ ಸಲ್ಲಿಸಿದರು. 
ನಂತರ ಗ್ರಾಮಸ್ಥರು ಮಾತನಾಡಿ, ಗುಡ್ಡಿಕೆರೆ, ಸಿದ್ಧನಕೊಡಿಗೆ, ಟಂಕಬೈಲು, ಕೋಡಿಗಳ್ಳ ಗ್ರಾಮಗಳಲ್ಲಿ ಅಡಿಕೆ, ತೆಂಗು, ಬಾಳೆ ಹಾಗೂ ನಾಟಿ ಮಾಡಿದ ಭತ್ತದ ಗದ್ದೆಯನ್ನು ಕಾಡಾನೆ ತುಳಿದು, ಸಸಿ ತಿಂದು ಧ್ವಂಸ ಮಾಡಿದೆ. ಒಂದು ತಿಂಗಳಿಂದ ಒಂಟಿ ಆನೆ ಗ್ರಾಮಗಳಲ್ಲಿ ಸುತ್ತಾಡುತ್ತಿದೆ.  ಒಂಟಿ ಸಲಗ ಹಿಡಿಯುವ ಕುರಿತು ಭರವಸೆ ನೀಡಬೇಕು. ಇಲ್ಲದಿದ್ದರೆ ಆಹೋರಾತ್ರಿ ಧರಣಿ ನಡೆಸುತ್ತೇವೆ. ಮುಂಬರುವ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಮಧುಕರ ಮನವಿ ಸ್ವೀಕರಿಸಿ ಮಾತನಾಡಿ, ಒಂಟಿ ಆನೆ ಸೆರೆ ಹಿಡಿಯಲು ಸರ್ಕಾರದ ಅನುಮತಿ ಕೇಳುತ್ತೇವೆ ಎಂದು ಭರವಸೆ ನೀಡಿದರು. ನಂತರ ಮಧುಕರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಭತ್ತದ ಗದ್ದೆ, ತೋಟಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರಾದ ಎಚ್.ಡಿ.ಲೋಕೇಶ್, ಮನು, ಮಂಜುನಾಥ್, ಪ್ರೇಮಾ ಇತರರಿದ್ದರು.