ಚಿಕ್ಕಮಗಳೂರು ಎಡಿಸಿ ನಂಜುಂಡೇಗೌಡ ಅವರಿಗೆ ಮನವಿ ಸಲ್ಲಿಸಿದ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಪದಾಧಿಕಾರಿಗಳು ದೇಶದ ಅತ್ಯುನ್ನತ ನಾಗರೀಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಇತ್ತೀಚೆಗೆ ನಿಧನರಾದ ಚಲನಚಿತ್ರ ಹಿನ್ನೆಲೆ ಗಾಯಕಿ ಗಾನ ಕೋಗಿಲೆ ಎಸ್.ಜಾನಕಿ ಅವರಿಗೆ ಮರಣೋತ್ತರವಾಗಿ ನೀಡುವಂತೆ ಒತ್ತಾಯಿಸಿದರು. 
ಚಿಕ್ಕಮಗಳೂರು

ಎಸ್‌.ಜಾನಕಿ ಅವರಿಗೆ ಭಾರತ ರತ್ನ ನೀಡುವಂತೆ ಒತ್ತಾಯ

ಚಿಕ್ಕಮಗಳೂರು: ದೇಶದ ಅತ್ಯುನ್ನತ ನಾಗರೀಕ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ಇತ್ತೀಚೆಗೆ ನಿಧನರಾದ ಚಲನಚಿತ್ರ ಹಿನ್ನೆಲೆ ಗಾಯಕಿ ಗಾನ ಕೋಗಿಲೆ ಎಸ್.ಜಾನಕಿ ಅವರಿಗೆ ಮರಣೋತ್ತರವಾಗಿ ನೀಡುವಂತೆ ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರನ್ನು ಮಂಗಳವಾರ ಭೇಟಿ ಮಾಡಿದ ಸಂಘಟನೆಯ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಎಸ್.ಜಾನಕಿ ಅವರು ಭಾರತೀಯ ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಒಡಿಯ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ ೧೭ ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ೪೮ ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ, ತಮ್ಮ ಸುಮಧುರ ಕಂಠದಿAದ ಭಾರತೀಯ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಅತ್ಯಂತ ಸರಳ ಸಜ್ಜನಿಕೆಯ ಗಾಯಕಿಯಾಗಿದ್ದ ಎಸ್.ಜಾನಕಿ ಅವರಿಗೆ ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರ ಪ್ರಶಸ್ತಿ, ವಿವಿಧ ರಾಜ್ಯಗಳ ೨೮ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ ಎಂದಿರುವ ಅವರು ಈ ಅಮರ ಗಾಯಕಿಯ ಹೆಸರು ಮತ್ತು ಕೊಡುಗೆ ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಅವರ ಅಪೂರ್ವ ಸಾಧನೆಯನ್ನು ಗೌರವಿಸಿ ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ಮಾಹಿತಿ ಹಕ್ಕು ಕಾರ್ಯಕರ್ತರ ಸಂಘಟನೆಯ ರಾಜ್ಯಾಧ್ಯಕ್ಷ ಸೋಮು ನಾಯಕ್, ಸಂಘಟನಾ ಕಾರ್ಯದರ್ಶಿ ರೂಪೇಶ್, ಪದಾಧಿಕಾರಿಗಳಾದ ದೌಲತ್ ಭಾಷಾ, ರವಿ, ಆಣೂರು ಶಿವು ಹಾಜರಿದ್ದರು.