ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಪಂ ಸಿದ್ಧನಕೊಡಿಗೆಯಲ್ಲಿ ಡಾ. ಕೆ.ಪಿ.ಅಂಶುಮಂತ್ ಹಾಗೂ ಕಾಂಗ್ರೆಸ್ ಮುಖಂಡರು ರೈತರೊಂದಿಗೆ ಚರ್ಚೆ ನಡೆಸಿದರು. ಗೇರ್‌ಬೈಲು ನಟರಾಜ್, ಕೆ.ವಿ.ಸಾಜು, ಕೆ.ಎಂ.ಸುಂದರೇಶ್, ದೇವಂತರಾಜ್ ಇತರರಿದ್ದರು. 
ಚಿಕ್ಕಮಗಳೂರು

ಒಂಟಿ ಸಲಗ ಸ್ಥಳಾಂತರಕ್ಕೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ರೈತರೊಂದಿಗೆ ಚರ್ಚೆ
  • ಕಾಂಗ್ರೆಸ್ ಮುಖಂಡರು
ಎನ್.ಆರ್.ಪುರ: ಕೆಲವು ತಿಂಗಳಿಂದಲೂ ಒಂಟಿ ಸಲಗ ಕಾಟ ನೀಡುತ್ತಿರುವ ಗುಬ್ಬಿಗಾ ಗ್ರಾಮ ಪಂಚಾಯಿತಿಯ ಸಿದ್ಧನಕೊಡಿಗೆ, ಅರಳಿಕೊಪ್ಪಕ್ಕೆ  ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹಾಗೂ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ, ರೈತರೊಂದಿಗೆ ಚರ್ಚೆ ನಡೆಸಿದರು.
ಸಿದ್ಧನಕೊಡಿಗೆಯಲ್ಲಿ ಶಾಲೆಗೆ ಹೋಗಲು ಕಾಯುತ್ತಿದ್ದ 6 ಮಕ್ಕಳನ್ನು ಒಂಟಿ ಸಲಗ ಬೆನ್ನಟ್ಟಿಹೋಗಿತ್ತು. ನಂತರ ಪ್ರತಿ ದಿನ ಎಂಬಂತೆ  ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ ಹಾಗೂ ಗದ್ದೆಯಲ್ಲಿ ನಾಟಿ ಮಾಡಿದ ಭತ್ತದ ಸಸಿ ತಿಂದು ನಾಶಪಡಿಸುತ್ತಿದೆ. ಒಂಟಿ ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಎರಡು ಬಾರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಇಲ್ಲಿನ ಜನರು ಭಯದಲ್ಲಿ ಬದುಕುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.
ಡಾ. ಕೆ.ಪಿ.ಅಂಶುಮಂತ್ ಅವರು ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ದೂರವಾಣಿ ಕರೆ ಮಾಡಿ ರೈತರ ಬೇಡಿಕೆಗಳನ್ನು ತಿಳಿಸಿದರು.  ಶಾಸಕ ಟಿ.ಡಿ.ರಾಜೇಗೌಡ ದೂರವಾಣಿಯಲ್ಲಿ ರೈತರೊಂದಿಗೆ ಮಾತನಾಡಿ, ಸದ್ಯಕ್ಕೆ ಒಂಟಿ ಸಲಗವನ್ನು ದಟ್ಟಾರಣ್ಯಕ್ಕೆ ಓಡಿಸುತ್ತೇವೆ. ಮತ್ತೆ ಒಂಟಿ ಸಲಗವು ಗ್ರಾಮಗಳಿಗೆ ಬಂದರೆ ಸೆರೆ ಹಿಡಿಯಲು ಸರ್ಕಾರ ತೀರ್ಮಾನಿಸುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರದ ನಿಯದ ಪ್ರಕಾರ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳದಲ್ಲಿದ್ದ ಚಿಕ್ಕ ಅಗ್ರಹಾರ ವಲಯ ಅರಣ್ಯಾಧಿಕಾರಿ ಮಧುಕರ ಅವರಿಗೆ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು. 
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ್, ಕಸಬಾ ಹೋಬಳಿ ಅಧ್ಯಕ್ಷ ಕೆ.ವಿ.ಸಾಜು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬೆನ್ನಿ, ಪಿಸಿಎಆರ್‌ಡಿ ಬ್ಯಾಂಕ್ ಅಧ್ಯಕ್ಷ ಕೆ.ಎಂ.ಸುಂದರೇಶ್, ಬ್ಯಾಂಕಿನ ನಿರ್ದೇಶಕ ದೇವಂತರಾಜ್ ಇತರರಿದ್ದರು.