ಕಳಸದ ಮುನ್ನೂರ್‌ಪಾಲ್ ಕುಟುಂಬದಲ್ಲಿ ಸೂತಕ ಕೈಬಿಡುವ ಐತಿಹಾಸಿಕ ನಿರ್ಣಯ ಮಾಡುತ್ತಿರುವುದು. 
ಚಿಕ್ಕಮಗಳೂರು

ಮುನ್ನೂರ್‌ಪಾಲ್ ಮನೆತನದಿಂದ ಸೂತಕ ಕೈಬಿಡುವ ನಿರ್ಣಯ

ಕಳಸ: ತಾಲೂಕಿನ ಬೃಹತ್ ಕುಟುಂಬಗಳಲ್ಲಿ ಒಂದಾದ ಕಳಸದ ಮುನ್ನೂರ್‌ಪಾಲ್ ಕುಟುಂಬ ಕಾಲಧರ್ಮ ಹಾಗೂ ಪ್ರಾಯೋಗಿಕ ಅಡಚಣೆಗಳ ಹಿನ್ನೆಲೆಯಲ್ಲಿ ಪರಸ್ಪರ ಕುಟುಂಬಗಳ ನಡುವಿನ ಸೂತಕವನ್ನು ಕೈಬಿಡುವ ಮಹತ್ವದ ನಿರ್ಣಯ ಕೈಗೊಂಡಿದೆ.
72ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ದೊಡ್ಡ ಕುಟುಂಬದಲ್ಲಿ ವರ್ಷಕ್ಕೆ ಸರಾಸರಿ 95ಕ್ಕೂ ಹೆಚ್ಚು ವೈದಿಕಗಳು(ಮರಣ ಸಂಬಂಧಿ ಕಾರ್ಯಗಳು) ನಡೆಯುತ್ತಿದ್ದವು. ವರ್ಷದ ಎಲ್ಲ ಮಾಸ ಹಾಗೂ ಪಕ್ಷಗಳಲ್ಲೂ ವೈದಿಕಗಳು ಇರುತ್ತಿದ್ದರಿಂದ ಶುಭ ಕಾರ್ಯಗಳನ್ನು ನಡೆಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗುತ್ತಿರಲಿಲ್ಲ. ವೈದಿಕಗಳ ಜತೆಗೆ ಮಂಗಳವಾರ, ಶನಿವಾರಗಳು, ಅಮಾವಾಸ್ಯೆ-ಹುಣ್ಣಿಮೆ, ಭರಣಿ-ಕೃತ್ತಿಕೆ ನಕ್ಷತ್ರಗಳು, ಆಷಾಢ, ಶೂನ್ಯ ಹಾಗೂ ಅಧಿಕ ಮಾಸಗಳನ್ನು ಲೆಕ್ಕ ಹಾಕಿದರೆ ವರ್ಷದ 365 ದಿನಗಳಲ್ಲಿ ಸುಮಾರು 300 ದಿನ ಶುಭ ಕಾರ್ಯಕ್ಕೆ ಲಭ್ಯವಿರುತ್ತಿರಲಿಲ್ಲ.
ಇದರಿಂದ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಪತಿ, ದೀಪಾವಳಿಯಂತಹ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಕುಟುಂಬ ದೊಡ್ಡದಾಗಿದ್ದರಿಂದ ಮೂರನೇ ತಲೆಮಾರಿನ ನಂತರದ ಸಂಬಂಧಗಳ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇರಲಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಿ ಕುಟುಂಬದ ಕುಲಪುರೋಹಿತರ ನೇತೃತ್ವದಲ್ಲಿ ಸಮಸ್ತ ಕುಟುಂಬದ ಸದಸ್ಯರ ಸಭೆ ಕರೆದು ತಲೆಮಾರುಗಳ ಅನ್ವಯ ಕುಟುಂಬವನ್ನು ಒಂಬತ್ತು ಭಾಗಗಳಾಗಿ ಪ್ರತ್ಯೇಕಿಸಿ, ಆ ಗುಂಪುಗಳ ನಡುವೆ ಇನ್ನು ಮುಂದೆ ಸೂತಕ ಪಾಲಿಸದಿರಲು ತೀರ್ಮಾನಿಸಲಾಯಿತು.
ದಿ. ಚಂದ್ರಶೇಖರಯ್ಯ ಕುಟುಂಬ ಹೊಸಳ್ಳಿ, ದಿ.ಅಣ್ಣಪ್ಪಯ್ಯ ಕುಟುಂಬ ಜಾವಳಿ, ದಿ.ವೆಂಕಪ್ಪಯ್ಯ ಹೆಕ್ಸಾರ್, ದಿ.ರಾಮಚಂದ್ರಯ್ಯ ಕಣದಮನೆ, ದಿ.ರಂಗಯ್ಯ ಕುಟುಂಬ ಮೇಲ್ಮನ್ಚಾಡಿ, ದಿ.ಅನಂತಯ್ಯ ಅಂಬಿನಕುಡಿಗೆ, ದಿ.ತಿಪ್ಪಯ್ಯ ಕವಿಲುಹೊಳೆ, ದಿ.ಕೃಷ್ಣದೇವರಯ್ಯ ಮುನ್ನೂರ್‌ಪಾಲ್, ಹಾಸಂಗಿ, ಮೆಗೂರು. ದಿ.ನಾರಾಣಪ್ಪಯ್ಯ ಕುಟುಂಬ, ಮುನ್ನೂರ್‌ಪಾಲ್ ಕುಟುಂಬಗಳಿಂದ ಮೇಗೂರು ಶ್ರೀಲಕ್ಷ್ಮೀ ವೆಂಕಟರಮಣ ಸನ್ನಿಧಾನದಲ್ಲಿ ವಿಶೇಷ ಪೂಜೆ ಹಾಗೂ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಕುಲಪುರೋಹಿತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಮೋದ್ ಭಾರತೀಪುರ, ಅ.ರಾ.ಸತೀಶ್ಚಂದ್ರ ಅಂಬಿನಕುಡಿಗೆ ಹಾಗೂ ಗೀತಾ ಮಕ್ಕಿಮನೆ ವಹಿಸಿದ್ದರು. ಈ ನಿರ್ಧಾರದಿಂದ ಮುಂದಿನ ದಿನಗಳಲ್ಲಿ ಕುಟುಂಬದ ಪ್ರತ್ಯೇಕಗೊಂಡ ಶಾಖೆಗಳು ತಮ್ಮ ಶುಭ ಕಾರ್ಯಗಳನ್ನು ಹಾಗೂ ಹಬ್ಬ ಹರಿದಿನಗಳನ್ನು ಅಡೆತಡೆಯಿಲ್ಲದೆ ಆಚರಿಸಲು ಅನುಕೂಲವಾದಂತಾಗಿದೆ.