ಬಾಳೆಹೊನ್ನೂರು ವಿದ್ಯಾಗಣಪತಿ ಸೇವಾ ಸಮಿತಿ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸುವ ಗಣೇಶ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಮೃತ್ತಿಕೆ ಪೂಜೆ ಮೂಲಕ ಚಾಲನೆ ನೀಡಲಾಯಿತು.  
ಚಿಕ್ಕಮಗಳೂರು

ವಿದ್ಯಾಗಣಪತಿ ವಿಗ್ರಹ ನಿರ್ಮಾಣಕ್ಕೆ ಮೃತ್ತಿಕೆ ಪೂಜೆ

ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸುವ ಗಣಪತಿ ಮೂರ್ತಿ ನಿರ್ಮಾಣ ಕಾರ್ಯಕ್ಕೆ ಮಂಗಳವಾರ ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಮೃತ್ತಿಕೆ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು.
ಸಮಿತಿ ಅಧ್ಯಕ್ಷ ಕೆ.ಎಸ್.ಚನ್ನಗಿರಿ ಈ ಕುರಿತು ಮಾಹಿತಿ ನೀಡಿ, ಸೆ.14ರಿಂದ 27ರವರೆಗೆ 68ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುವುದು. ಈ ಬಾರಿ 14 ದಿನ ಗಣೇಶೋತ್ಸವ ನಡೆಯಲಿದ್ದು, ಜಿಲ್ಲೆಯಲ್ಲಿ ದೊಡ್ಡ ಗಣೇಶೋತ್ಸವಗಳಲ್ಲಿ ಇದು ಒಂದಾಗಿದೆ.
14ದಿನ ಗಣೇಶನ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ನಿತ್ಯ ಸಂಜೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿಶ್ವ ಒಕ್ಕಲಿಗ ಸಂಸ್ಥಾನದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಂತಿಮ ದಿನ ವಿವಿಧ ಆಕರ್ಷಣೆಗಳೊಂದಿಗೆ ಪಟ್ಟಣದ ವೈಭವಯುತವಾದ ಮೆರವಣಿಗೆ ನಡೆಸಿ ವಿದ್ಯಾಗಣಪತಿ ವಿಗ್ರಹ ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ವಿದ್ಯಾಗಣಪತಿ ಸಮಿತಿ ಕಾರ್ಯದರ್ಶಿ ಸುರೇಂದ್ರ, ಸಿ.ವಿ.ಸುನೀಲ್, ಸಮಿತಿಯ ಪ್ರಮುಖರಾದ ಎಂ.ಎಸ್.ಅರುಣೇಶ್, ಎಂ.ಎಸ್.ಜಯಪ್ರಕಾಶ್, ಅಚ್ಯುತಗೌಡ, ಶಂಕರೇಗೌಡ, ಸುಧಾಕರ್, ಸದಾಶಿವಗೌಡ, ಸತೀಶ್ ಕಿಣಿ, ಅಶ್ವಥ್, ಅರ್ಚಕ ಕೆ.ಎಸ್.ಪ್ರಕಾಶ್‌ಭಟ್, ವಿಗ್ರಹ ಶಿಲ್ಪಿ ಪ್ರಸಾದ್ ಆಚಾರ್ಯ ಮತ್ತಿತರರು ಹಾಜರಿದ್ದರು.