ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಕೃಷಿ ಮೌಲ್ಯ ವರ್ಧನೆ ಕಾರ್ಯಾಗಾರ ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. 
ಚಿಕ್ಕಮಗಳೂರು

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಮಾತ್ರ ಬೆಳೆಯ ಮೌಲ್ಯ ಹೆಚ್ಚಳ

ಎನ್.ಆರ್.ಪುರ: ಕೃಷಿಕ ಸಮಾಜ ಸರ್ಕಾರ ಹಾಗೂ ರೈತರ ಮಧ್ಯ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸೀತೂರಲ್ಲಿ ಆಯೋಜಿಸಿದ್ದ ಕೃಷಿ ಮೌಲ್ಯ ವರ್ಧನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕೃಷಿಕ ಸಮಾಜ ಕೃಷಿ ಇಲಾಖೆ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುತ್ತಿದೆ. ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ದೇಶದ ಆರ್ಥಿಕತೆ ಬೆಳೆದಿದೆ ಎಂದರು.

ರಾಜ್ಯ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಅಡಿಕೆಗೆ ಎಲೆ ಚುಕ್ಕಿ ರೋಗ ಬಂದು ಸಾವಿರಾರು ಎಕರೆ ಅಡಿಕೆ ತೋಟ ನಾಶವಾಗಿದ್ದು ಅಡಿಕೆಗೆ ಪರ್ಯಾಯ ಬೆಳೆಕಂಡು ಹಿಡಿಯಬೇಕಿದೆ. ಮಲೆನಾಡು ಭಾಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರ ತೆರೆಯಬೇಕು. ಈ ವರ್ಷ ಬರಗಾಲ ಬಂದಿರುವುದರಿಂದ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯಅಡಿಕೆ ಮಾರಾಟ ಸಹಕಾರ ಸಂಸ್ಥೆಗಳ ಮಹಾ ಮಂಡಳದ ನಿರ್ದೇಶಕ ವೈ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಮಲೆನಾಡಿನಲ್ಲಿ ಅನೇಕ ಬೆಳೆ ಬೆಳೆಯಲಾಗುತ್ತಿದ್ದು ಇವುಗಳ ಮೌಲ್ಯ ವರ್ಧನೆ ಮಾಡಬೇಕಿದೆ. ಅಡಿಕೆಯಲ್ಲೂ ಹಸಿ ಹಾಗೂ ಒಣ ಅಡಿಕೆ ಮೌಲ್ಯ ವರ್ಧನೆಯಾಗಬೇಕಾಗಿದೆ. ಅಡಿಕೆಯಿಂದ ಅಡಿಕೆ ಪುಡಿ, ಸೋಪ್, ಚಾಕಲೇಟ್ ಸೇರಿದಂತೆ ಹಲವು ವಸ್ತುಗಳನ್ನು ಮೌಲ್ಯವರ್ಧನೆ ಮಾಡಬಹುದು. ಅಡಿಕೆ ಹಾಳೆಯಿಂದ ತಟ್ಟೆ, ವ್ಯಾನಿಟಿ ಬ್ಯಾಗ್, ಪೈಂಟ್ ಮಾಡಬಹುದು. ಹಲಸಿನಿಂದ ಹಪ್ಪಳ, ಜ್ಯೂಸ್,ಐಸ್ ಕ್ರೀಂ, ಸಹ ಮೌಲ್ಯವರ್ಧನೆ ಮಾಡಬಹುದು ರೈತರು ಬೆಳೆದ ವಸ್ತುಗಳಿಗೆ ಮೌಲ್ಯ ವರ್ಧನೆ ಮಾಡಿದರೆ ಮಾರುಕಟ್ಟೆಯ ಕೊರತೆ ಎದುರಾಗುವುದಿಲ್ಲ. ಮುಖ್ಯವಾಗಿ ರೈತರು ಗುಣಮಟ್ಟದ ಅಡಿಕೆ ತಯಾರಿಸಬೇಕು.ಪ್ರಸ್ತುತ ದೇಶದಲ್ಲಿ ಶೇಖಡ 30 ರಷ್ಟ್ಟು ಅಡಿಕೆ ಕೊರತೆ ಇದೆ ಎಂದರು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್,ಸೀತೂರು ವಿಎಸ್‌ಎಸ್‌ಎನ್ ಅಧ್ಯಕ್ಷ ಬಿ.ಪಿ.ಮೋಹನ್,ಪಿ.ಕೆ.ಬಸವರಾಜಪ್ಪ, ಕೆ.ಎನ್.ಗೋಪಾಲ ಹೆಗಡೆ, ಕೆಸಕೊಡಿಗೆ ಕೃಷ್ಣಮೂರ್ತಿ, ಡಿ.ಜಿ.ಮಂಜಪ್ಪ, ನವೀನ್, ಚೇತನ್, ಎನ್.ಪಿ.ರಮೇಶ್, ಬಿ.ಕೆ.ನಾರಾಯಣ ಸ್ವಾಮಿ, ಪ್ರಗತಿಪರ ಕೃಷಿಕರಾದ ಮಾವಿನ ಹಿತ್ತಲು ನಾರಾಯಣ, ಬಿ.ಕೆ.ಜಾನಕಿ ರಾಮ್, ಎ.ಎಸ್.ವೆಂಕಟರಮಣ, ಅನಿಲ್ ಇದ್ದರು.

ರೈತರೇ ವಿಜ್ಞಾನಿಗಳು

ರೈತರು ಬೆಳೆದ ಬೆಳೆ ಹಾಗೇ ಮಾರುಕಟ್ಟೆಗೆ ಹೋದರೆ ಬೆಲೆ ಕಡಿಮೆಯಾಗುತ್ತದೆ. ಅದನ್ನು ಪರಿವರ್ತನೆ ಮಾಡಿ ಮೌಲ್ಯ ವರ್ಧನೆ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಬೆಲೆ ಜಾಸ್ತಿ ಸಿಗಲಿದೆ. ಹಿಂದೆ ರಾಗಿ ಬೆಳೆಯುತ್ತಿದ್ದಾಗ ಕೇವಲರಾಗಿ ಮುದ್ದೆಗೆ ಸೀಮಿತವಾಗಿತ್ತು. ಮೌಲ್ಯವರ್ಧನೆ ಮಾಡಿದ್ದರಿಂದ ಬೇಕರಿಗಳಲ್ಲಿ ಅರ್ಥ ರಾಗಿಯಿಂದ ತಯಾರಿಸಿದ ವಸ್ತುಗಳು ಇವೆ ಎಂದು ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್ ಹೇಳಿದರು. ಕೋಲಾರ, ಚಿಕ್ಕಬಳ್ಳಾಪುರದಲ್ಲಿ ರೈತರು ಬೆಳೆದ ಟೊಮೋಟೋ ಮೌಲ್ಯ ವರ್ಧನೆ ಆಗದಿರುವುದರಿಂದ ಆಗಾಗ್ಗೆ ಬೆಲೆ ಕುಸಿದು ರಸ್ತೆಗೆ ಟೋಮೋಟೋ ಸುರಿಯಬೇಕಾಗಿದೆ. ರೈತರೇ ವಿಜ್ಞಾನಿಗಳಾಗಿದ್ದು, ನಾವು ರೈತರಿಂದ ಸಾಕಷ್ಟು ವಿಚಾರ ಕಲಿಯಬೇಕಾಗಿದೆ ಎಂದರು.

ಮಿಶ್ರ ಬೆಳೆಗೆ ಅದ್ಯತೆ ನೀಡಿ

ಜಿಲ್ಲೆಯಲ್ಲಿ 2.20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ.ಇದರಲ್ಲಿ 1ಲಕ್ಷ ಹೆಕ್ಚೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಅತಿ ಮಳೆಯಿಂದ ಅಡಿಕೆಗೆ ರೋಗ ಕಾಣಿಸುತ್ತಿದೆ. ತರೀಕೆರೆ, ಕಡೂರು ಭಾಗದಲ್ಲಿ ಅಡಿಕೆಯಿಂದ ಲಾಭ ಹೆಚ್ಚಾಗಿ ಬರುತ್ತಿದೆ. ರೈತರು ಅಡಿಕೆ ಜತೆಗೆ ಪರ್ಯಾಯ ಬೆಳೆ ಬಗ್ಗೆ ಗಮನ ನೀಡಬೇಕು. ಬಟರ್‌ಪ್ರೂಟ್ ಬೆಳೆಯಬಹುದು. ರೈತರು ಮಿಶ್ರ ಬೆಳೆ ಜತೆಗೆ ಬೆಳೆದ ಬೆಳೆಯನ್ನು ಮೌಲ್ಯವರ್ಧನೆ ಮಾಡಬೇಕು ಎಂದು ಚಿಕ್ಕಮಗಳೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕೆ.ಮಂಗಳಾ ಸಲಹೆ ನೀಡಿದರು.

ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರಿಗೆ ಕೃಷಿ ಸಾಲು ಕಟ್ಟುವ ಅವಧಿಯನ್ನು ಒಂದು ವರ್ಷ ಮುಂದೂಡಲಾಗಿದೆ. ಅನಗತ್ಯವಾಗಿ ನೀರು ಪೋಲು ಮಾಡಬಾರದು.ರಾಷ್ಟೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಶೀಘ್ರ ದುರಸ್ತಿ ಮಾಡಿಸಲಾಗುವುದು. ಗ್ರಾಮೀಣ ಭಾಗದ ರಸ್ತೆಗಳನ್ನು ಆದ್ಯತೆ ಮೇಲೆ ದುರಸ್ತಿ ಮಾಡಲಾಗುವುದು.
ಟಿ.ಡಿ.ರಾಜೇಗೌಡ ಶಾಸಕ