ಕಡೂರಿನ ಹಳ್ಳಿಕೆರೆ ಕಾವಲು ಸಮೀಪದ ಜಮೀನಿನಲ್ಲಿ ಡಿಸಿ ಬೆಳೆ ಸಮೀಕ್ಷೆ ನಡೆಸಿದರು. ತಿರುಮಲೇಶ್, ಮಂಗಳ ಹಾಗೂ ರೈತರು ಇದ್ದರು. 
ಚಿಕ್ಕಮಗಳೂರು

ಬೆಳೆ ನಷ್ಟ ಪರಿಹಾರಕ್ಕೆ ಬೆಳೆ ವಿಮೆ ಯೋಜನೆ ಕಡ್ಡಾಯ

ಕಡೂರು: ನೈಸರ್ಗಿಕ ವಿಕೋಪದಡಿ ಬೆಳೆ ನಷ್ಟ ಪರಿಹಾರ ಮುಖ್ಯವಾಗಲಿದ್ದು, ಬೆಳೆವಿಮೆ ಯೋಜನೆಯಡಿ ಎಲ್ಲ ರೈತರ ನೋಂದಣಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಭನ್ವರ್‌ಸಿಂಗ್ ಮೀನಾ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಖರಾಯಪಟ್ಟಣ ಹೋಬಳಿ ಭಾಗದ ಬೆರಟಿಕೆರೆ, ಹಳ್ಳಿಕೆರೆ ಕಾವಲುಗಳ ಸಮೀಪ ಹತ್ತಿ, ಮೆಕ್ಕೆಜೋಳ, ಅಲಸಂದೆ, ಈರುಳ್ಳಿ, ಆಲೂಗೆಡ್ಡೆ, ಟೊಮ್ಯಾಟೋ ಸೇರಿದಂತೆ ವಿವಿಧ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದ ಜಮೀನುಗಳಿಗೆ ಭೇಟಿ ನೀಡಿ ಮಾತನಾಡಿ, ನನ್ನ ಬೆಳೆ ನನ್ನ ಹಕ್ಕು ಎಂಬ ಪರಿಕಲ್ಪನೆಯಡಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ತಾವೇ ದಾಖಲು ಮಾಡಲು ಅವಕಾಶ ಕಲ್ಪಿಸಿದ್ದು, ರೈತರು ಹೆಚ್ಚಿನ ಪ್ರಯೋಜನ ಪಡೆಯಬೇಕು. ಮಳೆ ಕೊರತೆಯಿಂದ ರೈತರ ಜಮೀನಿನಲ್ಲಿ ತೇವಾಂಶ ಕಡಿಮೆಯಾಗಿ ಬೆಳೆಗಳ ಕುಂಠಿತ ಬೆಳವಣಿಗೆ, ರೋಗ ಮತ್ತು ಕೀಟ ಬಾಧೆಗಳಿಂದ ಹಾನಿಯಾಗಿರುವುದನ್ನು ಪರಿಶೀಲಿಸಿದರು.
ಬೆಳೆಸಾಲ ಪಡೆದ ರೈತರು ಬ್ಯಾಂಕ್‌ಗಳ ಮೂಲಕ ಹಾಗೂ ಬೆಳೆಸಾಲ ಪಡೆಯದ ರೈತರು ಸಾಮಾನ್ಯ ಸೇವಾಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳ ಮೂಲಕ ಬೆಳೆ ವಿಮೆ ಯೋಜನೆಗೆ ನೋಂದಣಿ ಮಾಡಬೇಕಿದೆ. ಪ್ರಸ್ತುತ ಜೋಳ, ಸೂರ್ಯ ಕಾಂತಿ, ನೆಲಗಡಲೆ, ಹತ್ತಿ, ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ಜು.31 ರಂದು ವಿಮೆ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಅಂತಿಮ ದಿನಾಂಕವಾಗಿದ್ದು, ಭತ್ತ, ಮುಸುಕಿನ ಜೋಳ, ರಾಗಿ ಹಾಗೂ ಸಾವೆ ಬೆಳೆಗಳಿಗೆ ಆ.14 ಅಂತಿಮ ದಿನಾಂಕವಾಗಿದೆ. ಎಲ್ಲ ರೈತರು ಬೆಳೆ ವಿಮೆ ಮಾಡಿಸುವಂತೆ ಕರೆ ನೀಡಿದರು.
ಬೆರಟಿಕೆರೆ ಗ್ರಾಮದ ಲೋಕೇಶ್ ಜಮೀನಿನಲ್ಲಿ ಬೆಳೆ ಸಮೀಕ್ಷೆಯ ವಸ್ತುಸ್ಥಿತಿ ಅವಲೋಕನ ನಡೆಸಿ ರೈತರ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ರೈತರ ಉಪಸ್ಥಿತಿಯಲ್ಲಿ ಬೆಳೆ ಸಮೀಕ್ಷೆಯನ್ನು ಖುದ್ದಾಗಿ ಕೈಗೊಂಡರು. ನಂತರ ಬೀರೂರು ಸಮೀಪದ ಅಮೃತ್ ಮಹಲ್ ಕಾವಲು-ತಳಿ ಸಂವರ್ಧನ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದ ಚಟುವಟಿಕೆಗಳನ್ನು ಪರಿಶೀಲಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ತಿರುಮಲೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಮಂಗಳ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಎಂ.ಆರ್.ಮೋಹನ್ ಕುಮಾರ್ ಮತ್ತಿತರಿದ್ದರು.