ಕ್ರೈಂ 
ಚಿಕ್ಕಮಗಳೂರು

ಕಾಫಿನಾಡಿನಲ್ಲಿ ನಕಲಿ ಛಾಪಾ ಕಾಗದ ಹಾವಳಿ

ಪ್ರಮುಖ ಮುಖ್ಯಾಂಶಗಳು

  • ಜಲಜೀವನ್‌ ಮಿಷನ್‌ ಕಾಮಗಾರಿಯಲ್ಲಿ ಭಾರಿ ಅಕ್ರಮ ಶಂಕೆ
  • ಶೃಂಗೇರಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳು
ಚಿಕ್ಕಮಗಳೂರು: ಇದುವರೆಗೆ ವನ್ಯಜೀವಿ ಮಾನವ ಸಂಘರ್ಷದ ಕಾರಣದಕ್ಕೆ ಸದಾ ಸುದ್ದಿಯಲ್ಲಿದ್ದ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಇದೀಗ ನಕಲಿ ಛಾಪಾ ಕಾಗದ ಬಳಕೆ ಕಾರಣಕ್ಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಕಲಿ ಛಾಪಾ ಕಾಗದ ಬಳಕೆ ಮಾಡಿ ಸರ್ಕಾರದ ಕಾಮಗಾರಿ ನಿರ್ವಹಿಸಲು ಕರಾರು ಒಪ್ಪಂದ ಮಾಡಿಕೊಂಡು ಖದೀಮರು ಸರ್ಕಾರವನ್ನೇ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ. ಹೀಗಾಗಿ ಅಧಿಕಾರಿಗಳು ನಕಲಿ ಛಾಪಾ ಕಾಗದಕ್ಕೆ ಸಂಬಂಧಿಸಿದಂತೆ ಒಂದರ ಹಿಂದೊಂದರಂತೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲು ಮಾಡಲಾರಂಭಿಸಿದ್ದಾರೆ.
ಅದರಲ್ಲಿಯೂ ಪ್ರಮುಖವಾಗಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದಿರುವ ಜಲಜೀವನ್ ಮಿಷನ್ ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಕೊಳವೆ ಬಾವಿ ಕೊರೆಯುವ ಕಾಮಗಾರಿ ಪಡೆಯಲು ಒಪ್ಪಂದ ಮಾಡಿಕೊಳ್ಳಲು ನಕಲಿ ಛಾಪಾ ಕಾಗದ ಬಳಕೆ ಮಾಡಿರುವ ಸಂಬಂಧ ಪ್ರಕರಣಗಳು ಒಂದರ ಹಿಂದೊಂದರಂತೆ ದಾಖಲಾಗುತ್ತಿವೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್ ಯೋಜನೆಯಡಿ ಬೋರ್‌ವೆಲ್ ಕಾಮಗಾರಿ ನಿರ್ವಹಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯೊಂದಿಗೆ ಮಾಡಿಕೊಂಡಿದ್ದ ಕರಾರು ಒಪ್ಪಂದದಲ್ಲಿ ನಕಲಿ ಛಾಪಾ ಕಾಗದಗಳನ್ನು ಬಳಸಿ ಸರ್ಕಾರಕ್ಕೆ ವಂಚಿಸಿರುವ ಎರಡು ಪ್ರತ್ಯೇಕ ಹಗರಣಗಳು ಶೃಂಗೇರಿ ಮತ್ತು ಕೊಪ್ಪ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಇದಲ್ಲದೆ ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಡಿ.ಎನ್.ಜೀವರಾಜ್ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ಗುತ್ತಿಗೆದಾರರು ಕೊರೆದಿರುವ ಕೊಳವೆ ಬಾವಿಗಳಿಗೆ ನಕಲಿ ಛಾಪಾ ಕಾಗದಗಳನ್ನು ನೀಡಿ ಕರಾರು ಒಪ್ಪಂದ ಮಾಡಿಕೊಂಡಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಚಿಕ್ಕಮಗಳೂರು ಕಚೇರಿಯಲ್ಲಿ ಕರಾರು ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಶೃಂಗೇರಿ ಮತ್ತು ಕೊಪ್ಪ ತಾಲೂಕುಗಳೆರಡರಲ್ಲೂ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ದೃಢಪಟ್ಟಿದೆ. ಅಲ್ಲದೆ ಕೆಡಿಪಿ ಪೂರ್ವಭಾವಿ ಸಭೆಯಲ್ಲೂ ಈ ನಕಲಿ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚನೆ ನೀಡಲಾಗಿತ್ತು.
ಶೃಂಗೇರಿ ಠಾಣೆಯಲ್ಲಿ ದಾಖಲಾದ ಮೊದಲ ಪ್ರಕರಣ
ಶೃಂಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕಾಮಗಾರಿಗಳ ಒಪ್ಪಂದಕ್ಕಾಗಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ರೌದ್ ಕುಂಡ್ ನಿವಾಸಿಯಾದ ಗುತ್ತಿಗೆದಾರ ಯು. ನಾಗರಾಜ್ ಎಂಬುವರು ಇಲಾಖೆಗೆ ಸಲ್ಲಿಸಿದ್ದ ಕರಾರು ಪತ್ರದಲ್ಲಿ ಒಂದು ಛಾಪಾ ಕಾಗದವು ಪುನರಾವರ್ತನೆಯಾಗಿರುವುದು ಪತ್ತೆಯಾಗಿದೆ. ಎನ್.ಆರ್. ಪುರ ಪೇಟೆಯ 'ಆಯಿರಾ ಡಿಜಿಟಲ್' ಸಂಸ್ಥೆಯೊAದಿಗೆ ಸೇರಿ ನಕಲಿ ಛಾಪಾ ಕಾಗದವನ್ನು ಸೃಷ್ಟಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿರುವ ಹಿನ್ನೆಲೆಯಲ್ಲಿ, ಶೃಂಗೇರಿ ಗ್ರಾಮೀಣ ಕುಡಿಯುವ ನೀರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆಶಾಲತ ಅವರು ನೀಡಿದ ದೂರಿನ ಮೇರೆಗೆ ಗುತ್ತಿಗೆದಾರ ಯು. ನಾಗರಾಜ್ ಮತ್ತು ಆಯಿರಾ ಡಿಜಿಟಲ್ ಸಂಸ್ಥೆಯ ವಿರುದ್ಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪ ಠಾಣೆಯಲ್ಲಿ ಮೂವರ ವಿರುದ್ಧ ಮತ್ತೊಂದು ಕೇಸ್
ಇದೇ ಮಾದರಿಯಲ್ಲಿ ಕೊಪ್ಪ ತಾಲೂಕಿನ ಉಪವಿಭಾಗದ ವ್ಯಾಪ್ತಿಯಲ್ಲೂ ಬೋರ್‌ವೆಲ್ ಕಾಮಗಾರಿಗಳ ಒಪ್ಪಂದಕ್ಕಾಗಿ ನಕಲಿ ಛಾಪಾ ಕಾಗದಗಳನ್ನು ಬಳಸಿ ಸರ್ಕಾರಕ್ಕೆ ವಂಚಿಸಿರುವುದು ಬೆಳಕಿಗೆ ಬಂದಿದೆ. ಎನ್.ಆರ್. ಪುರದ ಎಂ/ಎಸ್ ಎಸ್.ಕೆ.ಪಿ ಕನ್ಸ್ಟ್ರಕ್ಷನ್ ಅಂಡ್ ಬೋರ್‌ವೆಲ್ಸ್ನ ದಸ್ತಗೀರ್, ಕೊಪ್ಪಳ ಜಿಲ್ಲೆ ಕುಷ್ಟಗಿಯ ದೇವೇಂದ್ರ ಪಾಟೀಲ್ ಮತ್ತು ರಾಯಚೂರು ಜಿಲ್ಲೆ ಸಿಂಧನೂರಿನ ನಾಗರಾಜು ಎಂಬ ಮೂವರು ಗುತ್ತಿಗೆದಾರರು ಎನ್.ಆರ್. ಪುರದ 'ಆಯಿರಾ ಡಿಜಿಟಲ್' ಸಂಸ್ಥೆಯಲ್ಲಿ ನಕಲಿ ಒಪ್ಪಂದ ಪತ್ರಗಳನ್ನು ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಇಲಾಖೆಗೆ ಸಲ್ಲಿಸಿದ್ದರು. ಚಿಕ್ಕಮಗಳೂರು ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಇಂಜಿನಿಯರ್‌ಗಳ ಸೂಚನೆಯ ಮೇರೆಗೆ ಕೊಪ್ಪ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಪ್ರಭಾರ) ಸುನೀಲ್ ಕುಮಾರ್ ಅವರು ಕೊಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ಗುತ್ತಿಗೆದಾರರು ಹಾಗೂ ನಕಲಿ ದಾಖಲೆ ಸೃಷ್ಟಿಸಿಕೊಟ್ಟ ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಎನ್.ಆರ್.ಪುರ ಕೇಂದ್ರ ಬಿಂದು
ನಕಲಿ ಛಾಪಾ ಕಾಗದಗಳು ಸೃಷ್ಠಿಯಾಗಿರುವುದು ಎನ್.ಆರ್.ಪುರದಲ್ಲಿಯೇ ಎಂಬುದು ವಿಶೇಷವಾಗಿದೆ. ಶೃಂಗೇರಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎನ್.ಆರ್.ಪುರದಲ್ಲಿಯೂ ಭಾರಿ ಅಕ್ರಮ ನಡೆಸಿರುವ ಶಂಕೆಯಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನೀಲ್ ಕುಮಾರ್ ಎನ್.ಆರ್.ಪುರ ಪೊಲೀಸ್ ಠಾಣೆಗೆ ಈ ಸಂಬಂಧ ದೂರು ನೀಡಿದ್ದಾರೆ.
ಗುತ್ತಿಗೆದಾರರು ಬೋರ್‌ವೆಲ್ ಕಾಮಗಾರಿ ನಿರ್ವಹಿಸಲು ಸಲ್ಲಿಸಿದ್ದ ಒಪ್ಪಂದ ಪತ್ರಗಳಲ್ಲಿ ಒಟ್ಟು ೧೪ ಛಾಪಾ ಕಾಗದಗಳು ನಕಲಿಯಾಗಿರುವುದು ಪತ್ತೆಯಾಗಿದೆ. ಒಂದೇ ನಂಬರಿನ ಸ್ಟಾಂಪ್ ಪೇಪರ್‌ಗಳನ್ನು ಆರು ಬಾರಿ, ಇನ್ನೊಂದನ್ನು ಆರು ಬಾರಿ ಹಾಗೂ ಮತ್ತೊಂದನ್ನು ಎರಡು ಬಾರಿ ಪುನರಾವರ್ತನೆ ಮಾಡಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ.