ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ 
ಚಿಕ್ಕಮಗಳೂರು

ಆರ್‌ಟಿಒ ವಿರುದ್ಧ ಭ್ರಷ್ಟಾಚಾರ ಆರೋಪ

ನಿತ್ಯಾನಂದ ಎಸ್.ಎನ್.

ಪ್ರಮುಖ ಮುಖ್ಯಾಂಶಗಳು

  • ಆರ್‌ಟಿಒ ಕಚೇರಿ ವಿಚಾರಣೆ
  • ಸಾರಿಗೆ ಸಚಿವರಿಗೆ ದೂರು
ನಿತ್ಯಾನಂದ ಶಿವಗಂಗೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಹಣಕಾಸು ಅಕ್ರಮಗಳ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಆರ್ ಟಿಒ ರಾಕೇಶ್ ಕುಮಾರ್ ವಿರುದ್ಧ ಮತ್ತೊಂದು ಪ್ರಕರಣದಲ್ಲಿ ಸಾರಿಗೆ ಇಲಾಖೆಯಿಂದ ವಿಚಾರಣಾ ನೋಟಿಸ್ ಜಾರಿಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ಚಿಕ್ಕಮಗಳೂರು ಜಿಲ್ಲಾ ಘಟಕದ ವತಿಯಿಂದ ಏಪ್ರಿಲ್ 30 2026ರಂದು ಸಾರಿಗೆ ಸಚಿವರಿಗೆ ಸಲ್ಲಿಸಿರುವ ದೂರಿನಲ್ಲಿ, ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಅಧಿಕಾರ ವಹಿಸಿಕೊಂಡ ಬಳಿಕ ಕಚೇರಿಯ ವಿವಿಧ ಕೆಲಸಗಳು ಮತ್ತು ದಾಖಲೆಗಳಿಗಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದ್ದರೂ ಕಚೇರಿ ಮಟ್ಟದಲ್ಲಿ ಹಣ ಪಡೆಯಲಾಗುತ್ತಿದೆ. ಮೋಟಾರು ವಾಹನ ನಿರೀಕ್ಷಕರು, ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ನೌಕರರಿಗೆ ಮಾಸಿಕ ಹಣ ನೀಡುವಂತೆ ನಿಗದಿ ಮಾಡಲಾಗಿದೆ. ಹಣ ನೀಡದೆ ದಾಖಲೆಗಳಿಗೆ ಸಹಿ ಮಾಡಲಾಗುತ್ತಿಲ್ಲ ಎಂಬ ಆರೋಪವನ್ನೂ ಮಾಡಲಾಗಿದೆ.
ಶಿವಮೊಗ್ಗದ ಜಂಟಿ ಸಾರಿಗೆ ಆಯುಕ್ತರ ವಿರುದ್ಧವೂ ಆರೋಪ ಮಾಡಿರುವ ದೂರುದಾರರು, ಅವರ ವ್ಯಾಪ್ತಿಯಲ್ಲಿರುವ ಆರ್‌ಟಿಒ ಕಚೇರಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪ್ರತಿ ಆರ್‌ಟಿಒ ಕಚೇರಿಯಿಂದ ಸುಮಾರು ರೂ.3 ಲಕ್ಷ ಹಣ ಪಡೆಯಲಾಗುತ್ತಿದೆ ಹಾಗೂ ಒಟ್ಟು 13 ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ಹಣ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.
ಇದಲ್ಲದೆ ಹೊರರಾಜ್ಯಗಳ ಹಳೆಯ ವಾಹನಗಳ ಮೈಗ್ರೇಷನ್ ಮತ್ತು ನೋಂದಣಿ ಸಂದರ್ಭದಲ್ಲಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ. ಅರುಣಾಚಲ ಪ್ರದೇಶ ನೋಂದಣಿ ಹೊಂದಿರುವ ಭಾರಿ ವಾಹನಗಳನ್ನು ಚಿಕ್ಕಮಗಳೂರು ಆರ್‌ಟಿಒ ಕಚೇರಿಯಲ್ಲಿ ನಿಯಮಬಾಹಿರವಾಗಿ ಮೈಗ್ರೇಷನ್ ಹಾಗೂ ನೋಂದಣಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಚೇರಿಯಲ್ಲಿ ಮೋಟಾರು ವಾಹನ ನಿರೀಕ್ಷಕರ ಕೊರತೆ ಸೇರಿದಂತೆ ಹಲವು ಆಡಳಿತಾತ್ಮಕ ಸಮಸ್ಯೆಗಳಿದ್ದರೂ ಮೇಲಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಾಗಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸರ್ಕಾರಕ್ಕೆ ಬರಬೇಕಾದ ತೆರಿಗೆ ಹಣದಲ್ಲಿ ವಂಚನೆಯಾಗಿರುವ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಲಾಗಿದೆ.
ಆರ್ ಟಿಒ ವಿರುದ್ಧ ಮಾಡಿರುವ ಆರೋಪಗಳು ಇನ್ನೂ ಸಾಬೀತಾಗಿಲ್ಲ. ಸಂಬಂಧಪಟ್ಟ ಇಲಾಖೆ ತನಿಖೆ ಮತ್ತು ವಿಚಾರಣೆಯ ಬಳಿಕವೇ ಆರೋಪಗಳ ಸತ್ಯಾಸತ್ಯತೆ ಸ್ಪಷ್ಟವಾಗಬೇಕಿದೆ.
ಇಂದು ವಿಚಾರಣೆ
ಚಿಕ್ಕಮಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್ ಕುಮಾರ್ ಅವರ ಭ್ರಷ್ಟಾಚಾರದ ಬಗೆಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಆ. 10ರಂದು ಚಿಕ್ಕಮಗಳೂರು ಆರ್ ಟಿ ಓ ಕಚೇರಿಯಲ್ಲಿ ದೂರಿನ ವಿಚಾರಣೆ ನಡೆಯದೆ. ಈ ಕುರಿತು ಸಾರಿಗೆ ಆಯುಕ್ತರು ದೂರುದಾರರು ಹಾಗೂ ಆರ್ ಟಿಓ ಅಧಿಕಾರಿಗಳಿಗೆ ವಿಚಾರಣಾ ನೋಟೀಸ್ ಜಾರಿ ಮಾಡಿದ್ದಾರೆ.
ಆ. 10ರಂದು ಬೆಳಗ್ಗೆ 11 ಗಂಟೆಗೆ ಅಪರ ಸಾರಿಗೆ ಆಯುಕ್ತರು ದೂರುದಾರ ನೂರುಲ್ಲಾ ಖಾನ್, ಆರ್ ಟಿಓ ರಾಕೇಶ್ ಕುಮಾರ್, ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಭೀಮನಗೌಡ ಪಾಟೀಲ್ ಅವರ ವಿಚಾರಣೆ ನಡೆಸಲಿದ್ದಾರೆ. ಈ ವೇಳೆ ವಿಚಾರಣೆಗೆ ಪೂರಕವಾದ ದಾಖಲೆಗಳೊಂದಿಗೆ ಹಾಜರಾಗುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ.
ಇಲಾಖೆಯ ಅಧಿಕಾರಿಗಳು ವಿಚಾರಣೆ ನಡೆಸಲು ಮುಂದಾಗಿದ್ದು, ಆರ್‌ಟಿಒ ಸಂಬಂಧಪಟ್ಟ ದಾಖಲೆಗಳು, ಲೆಕ್ಕಪತ್ರಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಲಾಗಿದೆ.

ಆ. 10ರಂದು ವಿಚಾರಣೆಗೆ ಆಗಮಿಸುವಂತೆ ನೋಟೀಸ್ ಬಂದಿದೆ. ಅದರಂತೆ ನಾನು ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಲಿದ್ದೇನೆ. ಈಗ ನೀಡಿರುವ ದೂರು ಮಾತ್ರವಲ್ಲದೆ ಇನ್ನಷ್ಟು ಭ್ರಷ್ಟಾಚಾರ ನಡೆದಿರುವ ಮಾಹಿತಿಯೂ ಇದೆ. ಅದರ ದಾಖಲೆಗಳನ್ನು ಕಲೆ ಹಾಕುವ ಕೆಲಸ ಮಾಡುತ್ತಿದ್ದೇವೆ.‌ ದಾಖಲೆಗಳು ಸಿಕ್ಕ ಬಳಿಕ ಮತ್ತೆ ಇನ್ನೊಂದು ದೂರು ಸಲ್ಲಿಸಲಿದ್ದೇವೆ. ಆರ್ ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲಿಸುವುದೇ ನಮ್ಮ ಹೋರಾಟದ ಉದ್ದೇಶ.
ನೂರುಲ್ಲಾ ಖಾನ್, ದೂರುದಾರ