ಶೃಂಗೇರಿಯಲ್ಲಿ ಆಯೋಜಿಸಿದ್ದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಶಾಸಕ ಟಿ.ಡಿ ರಾಜೇಗೌಡ ಉದ್ಘಾಟಿಸಿದರು. ದಿನೇಶ್ ಹೆಗ್ಡೆ, ಎಚ್.ಎ.ಪ್ರಕಾಶ್, ಕೃಷ್ಣಮೂರ್ತಿ ಹೆಗ್ಗದ್ದೆ ಇದ್ದರು. 
ಚಿಕ್ಕಮಗಳೂರು

ಸಹಕಾರ ಸಂಸ್ಥೆಗಳು ಲಾಭಗಳಿಸುವ ಜತೆಗೆ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲಿ

ಶೃಂಗೇರಿ: ಸಹಕಾರ ಕ್ಷೇತ್ರದ ಷೇರುದಾರರಿಗೆ ಸಹಕಾರ ಕ್ಷೇತ್ರ ನಮ್ಮದು ಎಂದು ಭಾವನೆ ಪರಿಮೂಡಬೇಕು. ಸಹಕಾರಿ ಸಂಘ ಅಭಿವೃದ್ಧಿಯಾದರೆ ರೈತರ ಅರ್ಥಿಕ ಸಬಲತೆಗೆ ಪೂರಕ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಶೃಂಗೇರಿ ಕನ್ನಡ ಭವನದಲ್ಲಿ ಮಂಗಳವಾರ ಶೃಂಗಾದ್ರಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೇತೃತ್ವದಲ್ಲಿ ತಾಲೂಕಿನ ಸಹಕಾರ ಸಂಘ, ಬ್ಯಾಂಕ್‌ಗಳು, ಸೌಹಾರ್ದ ಸಹಕಾರಿಗಳು ಮತ್ತು ಸಹಕಾರ ಇಲಾಖೆ, ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರಿಗೆ ಸಹಕಾರ ತತ್ವದಲ್ಲಿ ವಿಶೇಷ ನಂಬಿಕೆ, ಬದ್ಧತೆ ಇತ್ತು. ಸಹಕಾರ ತತ್ವದ ಮೂಲಕ ಭವ್ಯ ಭಾರತದ ಕನಸನ್ನು ನನಸು ಮಾಡಿಕೊಳ್ಳಬಹುದು ಎಂಬ ಆಶಯ ಅವರಲ್ಲಿತ್ತು. ಸಹಕಾರ ಸಂಸ್ಥೆಗಳು ಕೇವಲ ಲಾಭಗಳಿಸುವ ಗುರಿ ಹೊಂದಿರದೆ ಸೇವಾ ಮನೋಭಾವದ ಸಂಸ್ಥೆಯಾಗಬೇಕು ಎಂದರು.

ಅಧಿಕಾರ ಎಂಬುದು ಶಾಶ್ವತವಲ್ಲ. ಸಹಕಾರಿ ತತ್ವದ ಬದ್ಧತೆಗಾಗಿ ಎಲ್ಲರೂ ಶ್ರಮಿಸಬೇಕು. ಈ ಆಶಯದೊಂದಿಗೆ ಸಹಕಾರ ಕ್ಷೇತ್ರದ ಪುನಶ್ಚೇತನಕ್ಕಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡೂ ಸಹಕಾರ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಬೇಕು. ಸಹಕಾರ ಸಂಘಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು, ಅಗತ್ಯ ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ನೆಮ್ಮಾರ್ ದಿನೇಶ್ ಹೆಗ್ಡೆ ಮಾತನಾಡಿ, ಒಬ್ಬ ವ್ಯಕ್ತಿ ಸಂಸ್ಥೆ ಕಟ್ಟಿದ್ದಾನೆ, ಬೆಳೆಸಿದ್ದಾನೆ ಎಂಬ ಕಾರಣಕ್ಕೆ ಆ ಸಂಸ್ಥೆ ಸದಾ ಆತನ ಹಿಡಿತದಲ್ಲಿ ಇರಬೇಕು ಎಂದೆನಿಲ್ಲ. ಸಂಸ್ಥೆ ಬೆಳೆಯ ಬೇಕಾದರೆ ಹೊಸ ಆಲೋಚನೆಗಳಿಗೆ, ಹೊಸ ನಾಯಕತ್ವಕ್ಕೆ ಮತ್ತು ಪ್ರಾಮಾಣಿಕವಾಗಿ ದುಡಿಯುವವರಿಗೆ ಅವಕಾಶ ನೀಡಬೇಕು. ವೈಯಕ್ತಿಕ ಲಾಭಕ್ಕಿಂತ ಸಂಸ್ಥೆ ಅಭಿವೃದ್ಧಿ ಮುಖ್ಯವಾಗಬೇಕು. ಸಾರ್ವಜನಿಕರ ಹಣ ಮತ್ತು ಆಸ್ತಿಯನ್ನು ಜವಾಬ್ದಾರಿಯಿಂದ ನಿರ್ವಹಿಸುವ ಪ್ರತಿಯೊಬ್ಬ ಆಡಳಿತ ಮಂಡಳಿ ಸದಸ್ಯರಲ್ಲಿ ಇರಬೇಕು. ಸಹಕಾರ ಕ್ಷೇತ್ರವು ರಾಜಕೀಯ ಪ್ರಭಾವದ ಕೇಂದ್ರವಾಗದೆ ಜನರ ಆರ್ಥಿಕ ಸ್ವಾವಲಂಬನೆ ಕೇಂದ್ರವಾಗಬೇಕು ಎಂದರು.

ಶೃಂಗಾದ್ರಿ ವಿವಿದೋದ್ದೇಶ ಸೌಹಾರ್ದ ಸಹಾಕಾರಿ ಸಂಘ ಅಧ್ಯಕ್ಷ ಬಿ.ವಿ.ಪ್ರವೀಣ್ ಮಾತನಾಡಿ, ಕುವೆಂಪು ಹೇಳಿದ ಹಾಗೆ ಸರ್ವರಿಗೂ ಸಮ ಪಾಲು, ಸಮಬಾಳು ಎಂಬ ಪರಿಕಲ್ಪನೆ ಸಹಕಾರ ಸಂಘಗಳಲ್ಲಿರಬೇಕು. ಸಹಕಾರ ತತ್ವದಲ್ಲಿ ಒಬ್ಬ ವ್ಯಕ್ತಿ ಒಂದು ಷೇರು ಹೊಂದಿರಲಿ ಅಥವಾ 100 ಷೇರುಗಳನ್ನು ಹೊಂದಿರಲಿ, ಆತನಿಗೆ ಸಿಗುವುದು ಒಂದೇ ಮತದ ಹಕ್ಕು. ಇಲ್ಲಿ ಬಡವ, ಶ್ರೀಮಂತ ಎಂಬ ಯಾವುದೇ ಭೇದ ಭಾವವಿಲ್ಲ. ಪ್ರತಿಯೊಬ್ಬ ಸದಸ್ಯನಿಗೂ ಸಮಾನ ಗೌರವ, ಸಮಾನ ಹಕ್ಕು ಮತ್ತು ಸಮಾನ ಪ್ರಾತಿನಿಧ್ಯ ನೀಡಬೇಕು ಎಂದರು.

ಸಹಕಾರಿ ಸಂಘದ ಹಿರಿಯ ಸದಸ್ಯರಾದ ಅಂಬ್ಲೂರು ರಾಮಕೃಷ್ಣ ಹಾಗೂ ತಿಮ್ಮಪ್ಪ ಗೌಡ ಮತ್ತು ಉತ್ತಮ ಸಹಕಾರ ಸಂಘ ಎಂದು ಶಾರದ ಕೃಷಿ ಪತ್ತಿನ ಸಹಕಾರ ಸಂಘವನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಸಹಕಾರ ಸಂಘದ ಅಧ್ಯಕ್ಷ ಗೇರ್‌ಬೈಲ್ ಶಂಕರಪ್ಪ, ಎಂ.ಎಚ್ ನಟರಾಜ್, ರಮೇಶ್‌ಭಟ್ ಕೊಡ್ತಲು ಎಚ್.ಕೆ ನವೀನ್ ಕಿಗ್ಗಾ, ವೆಂಕಟೇಶ್ ಹುಲಗಾರು, ಎಚ್.ಎಲ್.ತ್ಯಾಗರಾಜ್ ರಾವ್, ಸಹಕಾರ ಸಂಘದ ಸಿಇಒ ಮತ್ತು ಸಿಬ್ಬಂದಿಗಳು, ಷೇರುದಾರರು ಭಾಗವಹಿಸಿದ್ದರು.