ಮುತ್ತಿನಕೊಪ್ಪ ಗ್ರಾಪಂ ಮರಾಠಿ ಕ್ಯಾಂಪ್ ಮತ್ತು ಚೌಡಿಕಟ್ಟೆ ಗ್ರಾಮದಲ್ಲಿ ಡಾ. ಕೆ.ಪಿ.ಅಂಶುಮಂತ್ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಇ.ಸಿ.ಜೋಯ್, ಬಿ.ಎಸ್.ಸುಬ್ರಹ್ಮಣ್ಯ, ಬಿ.ವಿ.ಉಪೇಂದ್ರ ಇತರರಿದ್ದರು. 
ಚಿಕ್ಕಮಗಳೂರು

ಶಾಲೆಗೆ ಕಳುಹಿಸದ ಪಾಲಕರೊಂದಿಗೆ ಸಮಾಲೋಚನೆ

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಪಂ ಮರಾಠಿ ಕ್ಯಾಂಪ್ ಮತ್ತು ಚೌಡಿಕಟ್ಟೆ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್, ಮಕ್ಕಳನ್ನು ಶಾಲೆಗೆ ಕಳುಹಿಸದ ಪಾಲಕರೊಂದಿಗೆ, ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
 ನಾಲ್ಕು ದಿನಗಳಿಂದಲೂ ಮಕ್ಕಳು ಶಾಲೆಗೆ ಹೋಗದಿರುವುದರಿಂದ ಪಾಲಕರು ಸಹ ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗಿಲ್ಲ. ಮಕ್ಕಳು ಅಂಗನವಾಡಿಗೆ, ಶಾಲೆಗೆ ಹೋಗಲು, ಪಡಿತರ ತರಲು, ಕಾಡು ಹಾದಿಯ ಮೂಲಕವೇ ಸಾಗಬೇಕು. ಬೇಸಿಗೆಯಲ್ಲಿ ನಡೆದುಕೊಂಡು ಹೋಗಬಹುದು. ಮಳೆ ಬಂದರೆ ನಡೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಪಂ ಮಾಜಿ ಸದಸ್ಯ ದೇವಂತ್ ಗೌಡ ಮಾತನಾಡಿ, ಅಂಗನವಾಡಿಗೆ ಹೋಗುವ 13 ಮಕ್ಕಳು ಮರಾಠಿ ಕ್ಯಾಂಪ್‌ನಲ್ಲಿರುವುದರಿಂದ ಇಲ್ಲಿರುವ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಅಂಗನವಾಡಿ ಆರಂಭಿಸಲು ನಿರ್ಧರಿಸಲಾಗಿದೆ. ವಲಯ ಅರಣ್ಯಾಧಿಕಾರಿಗಳು ಸಮುದಾಯ ಭವನದಲ್ಲಿ ಶೌಚಗೃಹ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಸಮುದಾಯ ಭವನ ವೀಕ್ಷಣೆ ಮಾಡಿದ ಡಾ. ಕೆ.ಪಿ.ಅಂಶುಮಂತ್ ಅವರಿಗೆ ಸಮುದಾಯ ಭವನದ ಮೇಲ್ಛಾವಣಿ ಶೀಟ್‌ಗಳು ಹಾಳಾಗಿರುವುದು ಸೋರುತ್ತಿರುವ ಅಂಶ ಗಮನಕ್ಕೆ ಬಂತು. ಸ್ಥಳದಿಂದಲೇ ಭದ್ರಾ ಅಭಯಾರಣ್ಯದ ಡಿಎಫ್‌ಒ ಪುಲ್ಕಿತ್ ಮೀನಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮುದಾಯವನ್ನು ಸುಸಜ್ಜಿತವಾಗಿ ನಿರ್ಮಿಸಿಕೊಡುವಂತೆ ಮನವಿ ಮಾಡಿದರು.
ಗ್ರಾಮಸ್ಥರ ಆತಂಕ ತಿಳಿಯುತ್ತದೆ. ಗ್ರಾಮದಲ್ಲಿ ಸಮಸ್ಯೆಗಳು ಬಂದಾಗ ಗ್ರಾಮಸ್ಥರು ಒಟ್ಟಾಗಿ ಎದುರಿಸಬೇಕು ಎಂದು ಡಾ. ಕೆ.ಪಿ.ಅಂಶುಮಂತ್ ಗ್ರಾಮಸ್ಥರಿಗೆ ತಿಳಿಸಿದರು. 
ಗ್ರಾಮದಲ್ಲಿ ವಿದ್ಯುತ್ ಸಮಸ್ಯೆಯಿದೆ. ಬೈರಾಪುರ ಶಾಲೆಗೆ ಹೋಗುವ ರಸ್ತೆ ಮತ್ತು ಉಂಬಳೇಬೈಲು ಗ್ರಾಮದ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. 
ಬೈರಾಪುರದ ಅಂಗನವಾಡಿಗೆ ಭೇಟಿ ನೀಡಿ ಮರಾಠಿ ಕ್ಯಾಂಪ್‌ನಲ್ಲಿ 13 ಮಕ್ಕಳು ಇರುವುದರಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರು ಸಮನ್ವಯದಿಂದ ಎರಡೂ ಕಡೆ ಕಾರ್ಯನಿರ್ವಹಿಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಶಾಲಾ ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.
ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯ್, ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವಿ.ಉಪೇಂದ್ರ, ಮುತ್ತಿನಕೊಪ್ಪ ಗ್ರಾಪಂ ಮಾಜಿ ಸದಸ್ಯ ದೇವಂತ್‌ಗೌಡ, ಮಹೇಶ್, ಮುಖಂಡ ಜಾನ್, ಗ್ರಾಮಸ್ಥರು ಇದ್ದರು