ಕಡೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸಾರಿಗೆ ಬಸ್ ನಿಲ್ದಾಣದ ಕಾಮಗಾರಿಯನ್ನು ಶಾಸಕ ಕೆ.ಎಸ್.ಆನಂದ್ ಪರಿಶೀಲಿಸಿದರು. ಸತೀಶ್, ರವಿ ನಾಯಕ್, ಶ್ರೀಧರ್ ಸ್ವಾಮಿ, ಎಂ.ಶಿವಕುಮಾರ್ ಮತ್ತಿತರರಿದ್ದರು. 
ಚಿಕ್ಕಮಗಳೂರು

ಕಡೂರಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ನಿರ್ಮಾಣ

ಕಡೂರು: ಜನಸಂಖ್ಯೆಗೆ ಅನುಗುಣವಾಗಿ ಪಟ್ಟಣದಲ್ಲಿ ಸುಸಜ್ಜಿತ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ ಪ್ರಗತಿ ಪರಿಶೀಲಿಸಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ಹಂತದ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಮುಗಿಯಲಿದೆ. ಮೊದಲ ಹಂತದ ಕಾಮಗಾರಿಗೆ 6 ಕೋಟಿ ರೂ., 2ನೇ ಹಂತದ ಕಾಮಗಾರಿಗೆ 6 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲು ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.
ಈ ಹಿಂದೆ ಪ್ಲಾಟ್‌ಾರ್ಮ್‌ನಲ್ಲಿ 10 ಬಸ್‌ಗಳು ನಿಲ್ಲಲು ಅವಕಾಶವಿತ್ತು. ಆದರೆ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣದಲ್ಲಿ 12 ಬಸ್‌ಗಳ ನಿಲುಗಡೆಗೆ ಅವಕಾಶವಿರಲಿದೆ. ಪ್ಲಾಟ್‌ಾರ್ಮ್ ಅನ್ನು ಟಿ ಆಕಾರದಲ್ಲಿ ನಿರ್ಮಾಣ ಮಾಡುತ್ತಿರುವುದರಿಂದ ಜನರು ಕುಳಿತುಕೊಳ್ಳಲು ಹೆಚ್ಚಿನ ಆಸನಗಳನ್ನು ಅಳವಡಿಸಲು ವಿಶಾಲ ಜಾಗ ದೊರೆಯಲಿದೆ ಎಂದು ತಿಳಿಸಿದರು.
ಬಸ್ ನಿಲ್ದಾಣದಲ್ಲಿ ಮತ್ತಷ್ಟು ಶೌಚಗೃಹ ನಿರ್ಮಿಸಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಮಕ್ಕಳ ಪೀಡಿಂಗ್ ರೂಮ್, ಸಿಬ್ಬಂದಿ ವಿಶ್ರಾಂತಿ ಕೊಠಡಿ ಮತ್ತು ಪೊಲೀಸ್ ಚೌಕಿಯನ್ನು ನೂತನ ಬಸ್‌ನಿಲ್ದಾಣ ಒಳಗೊಳ್ಳಲಿದೆ. ಮೊದಲ ಅಂತಸ್ತಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ಕೂಡ ನೀಲಿನಕ್ಷೆಯಲ್ಲಿದೆ. ಕಾರು ಮತ್ತು ದ್ವಿಚಕ್ರ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸತೀಶ್, ಎಇಇ ಶ್ರೀಧರ್ ಸ್ವಾಮಿ, ಡಿಪೋ ವ್ಯವಸ್ಥಾಪಕ ರವಿ ನಾಯಕ್, ಸಹಾಯಕ ಸಂಚಾರಿ ನಿಯಂತ್ರಕ ಪ್ರದೀಪ್, ಇಂಜಿನಿಯರ್ ಗಿರೀಶ್, ಗುತ್ತಿಗೆದಾರ ಎಂ.ಶಿವಕುಮಾರ್, ಎಲ್.ದಿನೇಶ್ ಮತ್ತಿತರರಿದ್ದರು.