ಎನ್.ಆರ್.ಪುರ ರಾಜೀವ್ ನಗರ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಟಿ.ಡಿ.ರಾಜೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಪ್ರಶಾಂತ್ ಶೆಟ್ಟಿ, ಇ.ಸಿ.ಜೋಯಿ, ಬಿ.ವಿ.ಉಪೇಂದ್ರ, ನೂರುಲ್ ಹುದಾ, ಅಶ್ವಿನಿ ಇತರರಿದ್ದರು.
- ಮುಖ್ಯಮಂತ್ರಿ ವಿಶೇಷ ಅನುದಾನ
- ಪಟ್ಟಣ ಪಂಚಾಯಿತಿ ವಿಶೇಷ ಅನುದಾನ
- ವಿವಾಹ, ಸಾಂಸ್ಕೃತಿಕ ಕಾರ್ಯಕ್ರಮಗಳು
ಎನ್.ಆರ್.ಪುರ: ರಾಜೀವ್ ನಗರ ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 30 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದು, ಸುಸಜ್ಜಿತವಾಗಿ ನಿರ್ಮಿಸಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ 7ನೇ ವಾರ್ಡ್‌ನ ರಾಜೀವ್ ನಗರ ಬಡಾವಣೆಯಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದ 10 ಲಕ್ಷ ಮತ್ತು ಪಟ್ಟಣ ಪಂಚಾಯಿತಿ ವಿಶೇಷ ಅನುದಾನ 20 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಡಿ.ಬಿ.ಚಂದ್ರೇಗೌಡ ಶಾಸಕರಾಗಿದ್ದಾಗ ರಾಜೀವ್ ನಗರ ಬಡಾವಣೆ ನಿರ್ಮಾಣ ಮಾಡಿ 103 ಆಶ್ರಯ ಮನೆಗಳನ್ನು ಮಂಜೂರು ಮಾಡಿದ್ದರು. ಬಹಳಷ್ಟು ಬಡವರ್ಗದವರು, ಕೂಲಿ ಕಾರ್ಮಿಕರು ವಾಸವಾಗಿರುವ ಬಡಾವಣೆಯಲ್ಲಿ ವಿವಾಹ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತಿತರ ಸಮಾರಂಭಗಳಿಗೆ ಅನುಕೂಲವಾಗುತ್ತದೆ. ಮುರೊಳ್ಳಿ ಗ್ರಾಮದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಾಣ ಮಾಡಿದ್ದು, ಅದನ್ನು ವೀಕ್ಷಣೆ ಮಾಡಿ ಅದರಂತೆ ಇಲ್ಲೂ ಗುಣಮಟ್ಟದಲ್ಲಿ ಕಾಮಗಾರಿ ಕೈಗೊಳ್ಳಬೇಕು ಎಂದರು.
ಪಪಂ ಮಾಜಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಶಾಸಕರು ಸಮುದಾಯ ಭವನಕ್ಕೆ ಅನುದಾನ ಮೀಸಲಿಟ್ಟು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ನುಡಿದಂತೆ ನಡೆದಿದ್ದಾರೆ. ಇದರಿಂದ 103 ಕೂಲಿ ಕಾರ್ಮಿಕ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದರು.
ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಪಿಕಾರ್ಡ್ ಬ್ಯಾಂಕ್ ಸದಸ್ಯ ದೇವಂತ್ ರಾಜ್, ಮಾಜಿ ಅಧ್ಯಕ್ಷ ಬಿ.ವಿ.ಉಪೇಂದ್ರ, ಮೆಣಸೂರು ಗ್ರಾಪಂ ಮಾಜಿ ಸದಸ್ಯ ಬಿನು, ಯುವ ಕಾಂಗ್ರೆಸ್ ಮುಖಂಡ ಕೌಶಿಕ್, ಪಪಂ ಆಡಳಿತಾಧಿಕಾರಿ ನೂರುಲ್ ಹುದಾ, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್, ಇಂಜಿನಿಯರ್ ಅಶ್ವಿನಿ ಇದ್ದರು.