ಬೀರೂರಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆೆ ಕಾರ್ಯಕ್ರಮವನ್ನು ಬಿಇಒ ಬುರ್ಹಾನುದ್ದೀನ್ ಚೋಪ್ದಾರ್ ಉದ್ಘಾಟಿಸಿದರು. ಎನ್.ಬಿ.ಉಮೇಶ್, ಬಿ.ಆರ್.ಗಂಗಪ್ಪ, ಮಂಜಪ್ಪ ದೊಡ್ಡಮನಿ ಇತರರಿದ್ದರು.
ಬೀರೂರು: ನೆಲ, ಜಲ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಅವುಗಳನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬುರ್ಹಾನುದ್ದೀನ್ ಚೋಪ್ದಾರ್ ತಿಳಿಸಿದರು.
ಬೀರೂರಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಚಿಕ್ಕಮಗಳೂರು ಜಿಲ್ಲಾ ಅಂತರ್ಜಲ ಕಚೇರಿ ಆಶ್ರಯದಲ್ಲಿ ಆಯೋಜಿಸಿದ್ದ ನಮ್ಮ ಭೂಮಿ, ನಮ್ಮ ಜಲ, ನಮ್ಮ ಶಕ್ತಿ ವಿಷಯದ ಚಿತ್ರಕಲಾ ಸ್ಪರ್ಧೆಯಲ್ಲಿ ಮಾತನಾಡಿ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಅತಿಯಾದ ಅವಲಂಬನೆ ಪರಿಸರದ ಸಮತೋಲನ ಹಾಳುಮಾಡಬಹುದು. ನೀರು, ಭೂಮಿ ಹಾಗೂ ಶಕ್ತಿಯಂತಹ ಸಂಪನ್ಮೂಲಗಳನ್ನು ಮಿತವಾಗಿ ಬಳಸುವುದು ನಮ್ಮೆಲ್ಲರ ಹೊಣೆ ಎಂದರು.
ವಿಜ್ಞಾನ ಕೇಂದ್ರದ ಅಧ್ಯಕ್ಷ ಕೆ.ಎಸ್.ಸಂಪತ್‌ಕುಮಾರ್ ಮಾತನಾಡಿ, ಕೈಗಾರಿಕೆಗಳಲ್ಲಿ ಬಳಸಿದ ನೀರನ್ನು ಸಂಸ್ಕರಿಸಿ ಬಿಡುಗಡೆ ಮಾಡಿದರೆ ಜಲಮಾಲಿನ್ಯ ನಿಯಂತ್ರಿಸಬಹುದು. ಮಕ್ಕಳಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಣ, ನೀರಿನ ಸಂರಕ್ಷಣೆ, ಕಸ ವಿಂಗಡಣೆ ಸೇರಿದಂತೆ ಪರಿಸರ ಜಾಗೃತಿ ಮೂಡಿಸಬೇಕು ಎಂದು ಮಾಹಿತಿ ನೀಡಿದರು.
ಚಿತ್ರಕಲಾ ಸ್ಪರ್ಧೆಯಲ್ಲಿ ಕ್ರಮುಕ ಪ್ರೌಢಶಾಲೆಯ ಸಹನಾ(ಪ್ರ), ಲಿಂಗದಹಳ್ಳಿ ಸರ್ಕಾರಿ ಪ್ರೌಢಶಾಲೆಯ ಎಲ್.ಎಂ.ಜೀವಿತಾ(ದ್ವಿ) ಹಾಗೂ ಸಖರಾಯಪಟ್ಟಣ ಸರ್ಕಾರಿ ಪ್ರೌಢಶಾಲೆಯ ಸಮೃದ್ಧ(ತೃ) ಸ್ಥಾನ ಪಡೆದರು. ಶಿಕ್ಷಣ ಸಂಯೋಜಕ ಎನ್.ಬಿ.ಉಮೇಶ್, ಬಿ.ಆರ್.ಗಂಗಪ್ಪ, ಮಂಜಪ್ಪ ದೊಡ್ಡಮನಿ, ಶಿಕ್ಷಕ ಶಶಿಕುಮಾರ್ ಹಾಗೂ ತೀರ್ಪುಗಾರರಾದ ಚೈತ್ರಾ ಮತ್ತು ರಾಜಶೇಖರ್ ಇದ್ದರು.