ಕೊಪ್ಪದ ಉತ್ತಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪಾಲಕರಿಗೆ ಪರಿಕರಗಳನ್ನು ಹಸ್ತಾಂತರಿಸಲಾಯಿತು.
ಕೊಪ್ಪ: ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ಉಚಿತವಾಗಿ ವಿತರಣೆ ಮಾಡಲು ಕಾಂಗ್ರೆಸ್ ಮುಖಂಡರು ಅಡ್ಡಿ ಪಡಿಸುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಶ್ವನಾಥ ಗದ್ದೆಮನೆ ಚಾರಿಟಬಲ್ ಟ್ರಸ್ಟ್ ಹಾಗೂ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷ ಗದ್ದೆಮನೆ ವಿಶ್ವನಾಥ್ ಆರೋಪಿಸಿದ್ದಾರೆ.
ತಾಲೂಕಿನ ಉತ್ತಮೇಶ್ವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಪಾಲಕರಿಗೆ ವಿಶ್ವನಾಥ್ ಗದ್ದೆಮನೆ ಚಾರಿಟಬಲ್ ಟ್ರಸ್ಟ್ ನಿಂದ ಪರಿಕರಗಳನ್ನು ಹಸ್ತಾಂತರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು, ಕಾಂಗ್ರೆಸ್ ಮುಖಂಡರು ಶಾಲಾ ಮಕ್ಕಳಿಗೆ ಪರಿಕರ ವಿತರಿಸಲು ಇಲಾಖೆ ಮೂಲಕ ಅಡ್ಡಿಪಡಿಸುತ್ತಿದ್ದರೆ. ಬಡವರ ಮಕ್ಕಳಿಗೆ ಟ್ರಸ್ಟ್‌ನ ಮೂಲಕ ಸಹಾಯ ಹಸ್ತಾ ನೀಡುವುದಕ್ಕೂ ವಿರೋಧಿಸುವ ಮನಸ್ಥಿತಿ ಇರುವುದು ವಿಷಾದನೀಯ ಎಂದರು.
ಶಾಲಾ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಪೂರಕ ಪರಿಕರ ನೀಡುವುದು ಅಪರಾಧವೇ ಎಂಬುವುದನ್ನು ಶಾಸಕ ಟಿ.ಡಿ.ರಾಜೇಗೌಡರು ತಿಳಿಸಬೇಕು. 2023ರ ಸುತ್ತೋಲೆ ನೀಡಿ ಶಾಲಾ ಆವರಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಮಾಡಬಾರದು, ಪರಿಕರಗಳನ್ನು ನೀಡಬಾರದು ಎಂದು ಶಿಕ್ಷಕರಿಗೆ ತಿಳಿಸಿದ್ದಾರೆ. ನಾವು ಶಾಲಾ ಆವರಣದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ರಮ ಮಾಡಿದ್ದೇವೆ ಹೊರತು ರಾಜಕೀಯ ಮಾಡಿಲ್ಲ ಎಂದು ತಿಳಿಸಿದರು.
ನಮ್ಮ ಊರು ಅಭಿವೃದ್ಧಿಯಾಗಬೇಕು ಎಂದರೆ ಶಿಕ್ಷಣದಲ್ಲಿ ಅಭಿವೃದ್ಧಿ ಕಾಣಬೇಕು. ಸರ್ಕಾರಿ ಶಾಲೆಯಲ್ಲಿ ಬಡಮಕ್ಕಳು ಓದುತ್ತಿರುತ್ತಾರೆ. ಮಕ್ಕಳ ಪಾಲಕರಿಗೆ ಆರ್ಥಿಕ ಹೊರೆಯಾಗಬಾರದು ಎಂಬ ಕಾರಣಕ್ಕೆ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಸರ್ಕಾರಿ ಶಾಲಾ ಮಕ್ಕಳು ಸಮಾನವಾಗಿ ಬೆಳೆಬೇಕು ಎಂದು ಟ್ರಸ್ಟ್ ನಿಂದ ಉಚಿತವಾಗಿ ಪರಿಕರ ನೀಡಲಾಗುತ್ತಿದೆ. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಒತ್ತಾಯಿಸಿದರು.
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಶೆಟ್ಟಿಗದ್ದೆ ಮಾತನಾಡಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ ಬಿಇಒ, ಶಿಕ್ಷಕರಿಗೆ ಪರಿಕರ ವಿತರಿಸುವ ಕಾರ್ಯಕ್ರಮ ನಡೆಸಿದರೆ ಅಮಾನತ್ತು ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ಅವರ ಶಿಕ್ಷಣ ವಿರೋಧಿ ನಡೆಯನ್ನು ಒಕ್ಕೂಟದಿಂದ ಖಂಡಿಸಲಾಗುವುದು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅದ್ದಡ ಸತೀಶ್, ಮುಖಂಡರಾದ ಎಂ.ಕೆ ಕಿರಣ್ ಮಡಬಳ್ಳಿ, ಪುರುಷೋತ್ತಮ್ ಕುಸ್ಗಲ್, ರಾಘವೇಂದ್ರ ಕೆಸುವೆ, ಕವಿರಾಜ್, ಅಭಿಷೇಕ್ ಹೊಸಳ್ಳಿ, ಈಶ್ವರ್ ಮತ್ವಾನೆ ಮುಂತಾದವರಿದ್ದರು.