ಸಿ.ಟಿ.ರವಿ  
ಚಿಕ್ಕಮಗಳೂರು

ರಾಜಕೀಯ ಲಾಭಕ್ಕಾಗಿ ಎಸ್‌ಐಆರ್‌ಗೆ ಕಾಂಗ್ರೆಸ್ ವಿರೋಧ

ಚಿಕ್ಕಮಗಳೂರು: ಪ್ರಜಾಪ್ರಭುತ್ವದ ಸಾಂಸ್ಥಿಕ ಪ್ರಕ್ರಿಯೆಗಳ ಮೇಲೆ ಅಪನಂಬಿಕೆ ಸೃಷ್ಟಿಸುವುದೇ ಕಾಂಗ್ರೆಸ್‌ಗೆ ಒಂದು ಚಾಳಿಯಾಗಿ ಪರಿಣಮಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿ ಶುದ್ಧೀಕರಣಕ್ಕಾಗಿ ದಶಕಗಳಿಂದಲೂ ನಡೆದುಕೊಂಡು ಬಂದಿರುವ ಎಸ್‌ಐಆರ್ ಪ್ರಕ್ರಿಯೆಯನ್ನು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ವಿರೋಧಿಸುತ್ತಿದೆ. ಎಸ್‌ಐಆರ್ ಎಂಬುದು ನಿಯಮಿತವಾಗಿ ನಡೆಯುವ ಸಾಂಪ್ರದಾಯಿಕ ಪ್ರಕ್ರಿಯೆಯಾಗಿದ್ದು, 1952 ಮತ್ತು 1957ರಲ್ಲಿ ಜವಾಹರಲಾಲ್ ನೆಹರು ಹಾಗೂ 1967 ಮತ್ತು 1977ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಕಾಲದಲ್ಲೂ ನಡೆದಿದೆ ಎಂಬುದನ್ನು ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು ಎಂದರು.
ಮತದಾರರ ಪಟ್ಟಿಯಲ್ಲಿ ಅನರ್ಹರನ್ನು ಹೊರಗಿಟ್ಟು, ಅರ್ಹರಿಗೆ ಸ್ಥಾನ ಕಲ್ಪಿಸುವುದು ಈ ಪ್ರಕ್ರಿಯೆಯ ಮೂಲ ಉದ್ದೇಶವಾಗಿದೆ. ಇದನ್ನು ಸ್ಥಳೀಯ ಕಂದಾಯ, ಶಿಕ್ಷಣ ಇಲಾಖೆ ಬಿಎಲ್‌ಒಗಳು ನಿರ್ವಹಿಸುತ್ತಾರೆ ಹೊರತು ಯಾವುದೇ ಹೊರದೇಶದವರು ಬಂದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳದಲ್ಲಿ ಕಾಂಗ್ರೆಸ್ ಮತ್ತು ತಮಿಳುನಾಡಿನಲ್ಲಿ ಡಿಎಂಕೆ ಗೆದ್ದಾಗಲೂ ಇದೇ ಎಸ್‌ಐಆರ್ ಪ್ರಕ್ರಿಯೆ ನಡೆದಿತ್ತು. ಆದರೆ ತಾನು ಗೆದ್ದಾಗ ಸುಮ್ಮನಿದ್ದು, ಸೋತಾಗ ಮಾತ್ರ ಪ್ರಕ್ರಿಯೆಯ ಮೇಲೆ ಗೂಬೆ ಕೂರಿಸುವುದು ಕಾಂಗ್ರೆಸ್‌ನ ಇಬ್ಬಂದಿ ನೀತಿಯನ್ನು ತೋರಿಸುತ್ತದೆ. ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲೇ ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ನಡೆದಾಗಲೂ ಆಕ್ಷೇಪಣೆಗಳಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಆದರೂ ಇಂತಹ ಸಾಂವಿಧಾನಿಕ ಪ್ರಕ್ರಿಯೆಗಳ ಮೇಲೆ ಸಂಶಯ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ಗೆ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆಯೇ ಇಲ್ಲ ಎಂದು ಕಿಡಿಕಾರಿದರು.