ಬಾಳೆಹೊನ್ನೂರು: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೇಂದ್ರ ಸರ್ಕಾರ, ಚುನಾವಣಾ ಆಯೋಗ ಪ್ರಜಾತಂತ್ರ ವ್ಯವಸ್ಥೆಗೆ ಚೂರಿ ಇರಿತ ಮಾಡಿದೆ ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಸಮಿತಿ ಸದಸ್ಯ ಸುರೇಶ್ ಗಡಿಕಲ್ ಹೇಳಿದರು.
ಎಸ್‌ಐಆರ್ ಎಂಬುದು ದೇಶದ ಜನರು ಇದೂವರೆಗೆ ಕೇಳಿರದ ಪದವಾಗಿದ್ದು, ಇದು ಹೊಸದಾಗಿ ಆರಂಭಿಸಿರುವ ಪ್ರಕ್ರಿಯೆಯಾಗಿದೆ. ನುಸುಳುಕೋರರನ್ನು ಪತ್ತೆ ಹಚ್ಚುವ ಹೆಸರಿನಲ್ಲಿ ನೈಜ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟು ಅವರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಬಿಹಾರದಲ್ಲಿ 61ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಆದರೆ ಇದರಲ್ಲಿ ಕೇವಲ ಇಬ್ಬರು ಮಾತ್ರ ಬಾಂಗ್ಲಾ ನುಸುಳುಕೋರರು ಇದ್ದಾರೆ. ಪಶ್ಚಿಮ ಬಂಗಾಳದಲ್ಲಿ 91ಲಕ್ಷ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟು ಅವರ ಹಕ್ಕನ್ನು ಕಸಿದುಕೊಳ್ಳಲಾಗಿದೆ. ದೇಶಾದ್ಯಂತ 13 ರಾಜ್ಯಗಳಲ್ಲಿ ಸುಮಾರು 6.5 ಕೋಟಿಗೂ ಹೆಚ್ಚು ಮತದಾರರನ್ನು ಎಸ್‌ಐಆರ್ ಹೆಸರಿನಲ್ಲಿ ಪಟ್ಟಿಯಿಂದ ಕೈಬಿಡಲಾಗಿದೆ. ಈಗಾಗಲೇ ಪಟ್ಟಯಿಂದ ಕೈಬಿಟ್ಟ ಮತದಾರರ ಭವಿಷ್ಯ ಏನು ಎಂದು ಪ್ರಶ್ನಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಕೆಲವೇ ದಿನಗಳಲ್ಲಿ ಈ ಗಂಡಾಂತರ ಕರ್ನಾಟಕಕ್ಕೂ ವ್ಯಾಪಿಸಲಿದ್ದು, ಎಸ್‌ಐಆರ್ ಹೆಸರಿನಲ್ಲಿ ನಡೆಸುತ್ತಿರುವ ಇಂತಹ ಪ್ರಕ್ರಿಯೆಗಳು ಪ್ರಜಾತಂತ್ರದ ನೈಜವಾದ ನಡೆಯಲ್ಲ. ಪರಿಷ್ಕರಣೆ ಹೆಸರಿನಲ್ಲಿ ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಕಸಿದು, ಸಂವಿಧಾನವನ್ನೇ ಬುಡಮೇಲು ಮಾಡಲು ಹೊರಟಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಸಮಯಾವಕಾಶವಿದ್ದರೂ ಸಹ ಚುನಾವಣಾ ಆಯೋಗ ತರಾತುರಿಯಲ್ಲಿ ಪರಿಷ್ಕರಣೆಗೆ ಹೊರಟಿದೆ. ಇದರಿಂದ ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಹಕ್ಕು ಕಿತ್ತುಕೊಂಡಂತೆ ಆಗಲಿದೆ. ಏಕರೂಪ ನಾಗರಿಕ ಸಂಹಿತೆ ಮುಂತಾದವನ್ನು ಜಾರಿಗೆ ತರಲು ಹೊರಟು ಹಿನ್ನಡೆ ಅನುಭವಿಸಿದ ಸರ್ಕಾರ ಇದೀಗ ಎಸ್‌ಐಆರ್ ಮೂಲಕ ಅವುಗಳ ಜಾರಿಗೆ ಯತ್ನಿಸುತ್ತಿದೆ ಎಂದು ದೂರಿದರು.