ಸೊಪ್ಪಿನಬೆಟ್ಟ ಮಂಜೂರಾತಿ ಪ್ರಕ್ರಿಯೆ ತಡೆ ಹಿಡಿದಿರುವುದನ್ನು ಖಂಡಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು
ಶೃಂಗೇರಿ: ಸೊಪ್ಪಿನಬೆಟ್ಟ ಮಂಜೂರಾತಿ ಪ್ರಕ್ರಿಯೆ ತಡೆ ಹಿಡಿದಿರುವುದನ್ನು ಖಂಡಿಸಿ ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.
ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ ಮಾತನಾಡಿ, ಬ್ರಿಟಿಷರ ಕಾಲದಿಂದಲೂ ಮಲೆನಾಡು ಪ್ರದೇಶದಲ್ಲಿ ಜಮೀನು ಇದ್ದ ಕಡೆ ಸೊಪ್ಪಿನಬೆಟ್ಟ ರೈತರಿಗೆ ಸೇರಿದ ಜಾಗ ಎಂಬ ಉಲ್ಲೇಖವಿದೆ. 1867ರಲ್ಲಿ ಬ್ರಿಟಿಷ್ ಸರ್ಕಾರ ಮೊದಲಬಾರಿಗೆ ಸೊಪ್ಪಿನಬೆಟ್ಟದಲ್ಲಿ ರೈತರಿಗೆ ಅವಶ್ಯಕವಾದ ದರಗು, ಸೊಪ್ಪು, ಮಣ್ಣು ಪಡೆಯುವ ಹಕ್ಕು ನೀಡಲಾಗಿತ್ತು. ನಂತರ 1867 ರಲ್ಲಿ ಪ್ರತಿ ಒಂದು ಎಕರೆಗೆ ನಾಲ್ಕು ಆಣೆ ಕರವಿಧಿಸಿ ಜಾಗ ಬಳಕೆಗೆ ಅಧಿಕೃತ ಹಕ್ಕು ನೀಡಲಾಗಿತ್ತು. ಸ್ವಾತಂತ್ರ್ಯ ನಂತರದಲ್ಲಿ ಇದನ್ನು ಕಸಿದುಕೊಂಡು ಅರಣ್ಯ ಇಲಾಖೆಗೆ ವರ್ಗಾಯಿಸುವ ವ್ಯವಸ್ಥಿತ ವರ್ಗಾಯಿಸುವ ಹುನ್ನಾರ ನಡೆಯುತ್ತಿದೆ. ರೈತರ ಐತಿಹಾಸಿಕ ಹಕ್ಕುಗಳನ್ನು ಈಗಿನ ಸರ್ಕಾರಗಳು ಕಸಿದುಕೊಳ್ಳಲು ಹೊರಟಿರುವುದು ಖಂಡನೀಯ ಎಂದರು.
ಸಮಿತಿ ಪ್ರಧಾನ ಕಾರ್ಯದರ್ಶಿ ರಂಜಿತ್ ಮಾತನಾಡಿ, ಜನಪ್ರತಿನಿಧಿಗಳು ರೈತರ ಬಗ್ಗೆ ಬದ್ಧತೆ ತೋರಿಸಬೇಕು. 2007ರಲ್ಲಿ ಅಂದಿನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅವರು ನೀಡಿದ ಆದೇಶದಂತೆ ಸೊಪ್ಪಿನ ಬೆಟ್ಟದಲ್ಲಿ ಹಕ್ಕುಪತ್ರ ಎಂದು ಉಲ್ಲೇಖಿಸಿದ್ದಾರೆ. ನಗರ ಬೆಳೆದಂತೆ ಕಾಡು ನಾಶವಾಗುತ್ತದೆ. ಮಲೆನಾಡಿಗರು ಕಾಡು ಉಳಿಸಿ ಬೆಳೆಸಿದ್ದಾರೆ. ಅದು ಅವರ ಬದುಕಿಗೆ ಮುಳುವಾಗಿದೆ. ಸಂಸದರು, ಶಾಸಕರು ಅರಣ್ಯಯೋಜನೆ ಸಮಸ್ಯೆಗಳ ಕುರಿತು ಪರಿಹಾರ ನೀಡುವಲ್ಲಿ ವಿಲರಾಗಿದ್ದಾರೆ ಎಂದು ಆರೋಪಿಸಿದರು.
ಸಮಿತಿ ಗೌರವಾಧ್ಯಕ್ಷ ಕೆ.ಎಂ.ಶ್ರೀನಿವಾಸ್, ಉಪಾಧ್ಯಕ್ಷ ತ್ಯಾಗರಾಜ್‌ರಾವ್, ಕೋಟೆ ವೆಂಕಟೇಶ್, ಪದಾಧಿಕಾರಿಗಳಾದ ಅಂಗುರ್ಡಿ ದಿನೇಶ್, ಆಗುಂಬೆ ಗಣೇಶ್‌ಹೆಗಡೆ, ಪ್ರಸನ್ನ ಬೇಗಾನೆ, ನಾಗೇಂದ್ರ, ರೈತ ಮುಖಂಡರಾದ ಸುರೇಶ್ ಜಟಿಗೇಶ್ವರ, ಹೆಬ್ಬಿಗೆ ಕೃಷ್ಣಮೂರ್ತಿ, ಸುರೇಶ್ ಹೆಡ್ಲುಕೊಡಿಗೆ, ತಿಮ್ಮಯ್ಯ ಉಪಸ್ಥಿತರಿದ್ದರು.