ಸಂಸೆ-ಎಳನೀರು ರಸ್ತೆ ಕಾಮಗಾರಿ ಕಳಪೆ ಹಿನ್ನೆಲೆಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಗುತ್ತಿಗೆದಾರರನ್ನು ಪ್ರಶ್ನಿಸುತ್ತಿರುವುದು. 
ಚಿಕ್ಕಮಗಳೂರು

ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆ

ಜಿ. ಗಜೇಂದ್ರ
ಕಳಸ: ಸಂಸೆ-ಎಳನೀರು ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ನಡೆಸಿದ ಪ್ರತಿಭಟನೆ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದು ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಸಂಸೆ-ಎಳನೀರು ಸಂಪರ್ಕಿಸುವ ಸುಮಾರು ಒಂದು ಕಿ.ಮೀ. ಉದ್ದದ ರಸ್ತೆಗೆ 80 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ  ನಡೆಯುತ್ತಿದ್ದು ಗುಣಮಟ್ಟದ ಕೆಲಸ ಆಗುತ್ತಿಲ್ಲ ಎಂದು ಸ್ಥಳೀಯ ಗ್ರಾಮಸ್ಥರು ಕೆಲ ದಿನಗಳ ಹಿಂದೆ ಆರೋಪಿಸಿದ್ದರು. ಕಾಮಗಾರಿಯ ದೋಷಗಳನ್ನು ತೋರಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಾನುವಾರ ಸ್ಥಳಕ್ಕೆ ತೆರಳಿ ಕಳಪೆ ಕಾಮಗಾರಿ ಖಂಡಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಸ್ಥಳದಲ್ಲಿದ್ದ ಗುತ್ತಿಗೆದಾರರ ಪ್ರತಿನಿಧಿಗಳೊಂದಿಗೆ ಕಾಮಗಾರಿಯ ಗುಣಮಟ್ಟ ಕುರಿತು ಪ್ರಶ್ನಿಸಿದರು. ಇದೇ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಕಾಂಗ್ರೆಸ್ ಕಾರ್ಯಕರ್ತರಾದ ಸುಜಿತ್ ಹಾಗೂ ಶ್ರೀನಿವಾಸ ಪ್ರತಿಭಟನಾಕಾರರೊಂದಿಗೆ ವಾಗ್ವಾದಕ್ಕೆ ಇಳಿದರು. ಗುಣಮಟ್ಟದ ಕೆಲಸ ನಡೆಯುತ್ತಿದ್ದರೂ ಆರೋಪ ಮಾಡಲಾಗುತ್ತಿದೆ. ಗುತ್ತಿಗೆದಾರರಿಗೆ ಕೆಲಸ ಮಾಡಲು ಬಿಡುತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಬೇಡ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದರು.
ಇದಕ್ಕೆ ತಿರುಗೇಟು ನೀಡಿದ ಬಿಜೆಪಿ ಕಾರ್ಯಕರ್ತರು, ಗುತ್ತಿಗೆದಾರರ ಪರವಾಗಿ ಇಷ್ಟು ಉತ್ಸಾಹದಿಂದ ಮಾತನಾಡುತ್ತಿರುವುದೇ ಸಂಶಯಾಸ್ಪದವಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಅನುಮಾನ ವ್ಯಕ್ತಪಡಿಸಿದರು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ತಾರಕಕ್ಕೇರಿದಾಗ ಪರಸ್ಪರ ದಿಕ್ಕಾರ ಕೂಗಾಟ, ಆಕ್ರೋಶದ ಘೋಷಣೆಗಳು ಕೇಳಿಬಂದವು.
ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ರಫೀಕ್ ಸ್ಥಳಕ್ಕೆ ಆಗಮಿಸಿ ಎರಡೂ ಪಕ್ಷದವರನ್ನು ಸಮಾಧಾನಪಡಿಸಲು ಯತ್ನಿಸಿದರು. ಪೊಲೀಸರು ಕೂಡ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. 
ಕಳಸ ಬಿಜೆಪಿ ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿಗಳಾದ ಬಿ.ಕೆ.ಮಹೇಶ್, ಸುಂದರ ಶೆಟ್ಟಿ, ಕಾರ್ಯಕರ್ತರಾದ ಶಿವು, ಸುದರ್ಶನ್, ಜಗದೀಶ್, ಕುಮಾರ್, ರಾಜೇಂದ್ರ, ಮೋಹನ್, ಸುರೇಶ್, ಕೆ.ಎನ್.ಧರಣೇಂದ್ರ, ವಿಜಯ್, ಕುಮಾರ ವೇಲು ಇತರರಿದ್ದರು.