ಕಲಶೇಸ್ವರ ದೇವಸ್ಥಾನದ ತಿರುವಿನಿಂದ ಕೈಮರದ ವರೆಗೆ ರಸ್ತೆ ಅಗೆದು ಹಾಕಿರುವುದು.
ಕಳಸ: ಕಳಸದ ಶ್ರೀ ಕಲಶೇಶ್ವರ ದೇವಸ್ಥಾನದ ಸಮೀಪದಿಂದ ಕೈಮರದವರೆಗಿನ ಕಾಂಕ್ರೀಟ್ ರಸ್ತೆ ಕಾಮಗಾರಿ ಪಟ್ಟಣದ ಜನತೆಗೆ ಶಾಪವಾಗಿ ಪರಿಣಮಿಸಿದೆ. ಅಧಿಕಾರಿಗಳು, ಗುತ್ತಿಗೆದಾರರ ಬೇಜವಾಬ್ದಾರಿ ಹಾಗೂ ಆಮೆಗತಿಯ ಕೆಲಸದಿಂದ ಕಳಸ ಪಟ್ಟಣದ ಜನತೆ ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕಲಶೇಶ್ವರ ದೇವಸ್ಥಾನದ ಸಮೀಪ ಶಿಥಿಲಗೊಂಡಿದ್ದ 270 ಮೀಟರ್ ಮುಖ್ಯ ರಸ್ತೆಯ ಅಭಿವೃದ್ಧಿಗೆ ಸರ್ಕಾರದಿಂದ 1 ಕೋಟಿ ರೂ. ಅನುದಾನ ಮಂಜೂರಾಗಿತ್ತು. ನವೆಂಬರ್‌ನಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಆರು ತಿಂಗಳು 160 ಮೀಟರ್ ಕೆಲಸ ಮಾಡಿ ಉಳಿದ ಕಾಮಗಾರಿಯನ್ನು ಅರ್ಧಕ್ಕೆ ಕೈ ಬಿಡಲಾಗಿತ್ತು. ಕಾಮಗಾರಿ ಅರ್ಥಕ್ಕೆ ನಿಂತಿರುವುದನ್ನು ಖಂಡಿಸಿ ಭಾರತೀಯ ಕಮ್ಯೂನಿಸ್ಟ್ ಪಕ್ಷ ಜೂ.31ರಂದು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಇಲಾಖೆ ತರಾತುರಿಯಲ್ಲಿ ಉಳಿದ 110 ಮೀಟರ್ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಮುಂದಾಗಿದೆ.
ಮಳೆಗಾಲ ಹತ್ತಿರದಲ್ಲಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಳ್ಳದೆ ಇಡೀ ರಸ್ತೆಯನ್ನು ಅಗೆದು ಹಾಕಲಾಗಿದೆ. ಇದು ಅಧಿಕಾರಿಗಳ ದೂರದೃಷ್ಠಿಯ ಕೊರತೆಯೋ ಅಥವಾ ಕೇವಲ ಕಣ್ಣೊರೆಸುವ ತಂತ್ರವೋ ಎಂಬ ಪ್ರಶ್ನೆ ಮೂಡಿದೆ. ಈ ಹಿಂದೆ ಕಾಂಕ್ರೀಟ್ ರಸ್ತೆಯ ಎರಡೂ ಬದಿಯಲ್ಲಿ ಸಮರ್ಪಕವಾಗಿ ಚರಂಡಿ ನಿರ್ಮಿಸದ ಕಾರಣ ಮಳೆ ನೀರು ನೇರವಾಗಿ ಕಳಸ ಪಟ್ಟಣದ ಮುಖ್ಯ ರಸ್ತೆಯಲ್ಲಿ ಹರಿಯಲಾರಂಭಿಸಿತ್ತು. ಇದರ ಜತೆಗೆ ಹೊಸದಾಗಿ ಅಗೆದಿರುವ ಮಣ್ಣನ್ನು ಕಾಂಕ್ರೀಟ್ ರಸ್ತೆ ಅಂಚಿನಲ್ಲಿ ಅತ್ತ ರಸ್ತೆಯೂ ಅಲ್ಲ , ಇತ್ತ ಚರಂಡಿಯೂ ಅಲ್ಲದ ಜಾಗಕ್ಕೆ ತಂದು ಸುರಿಯಲಾಗಿದೆ. ಶುಕ್ರವಾರ ರಾತ್ರಿ ಸುರಿದ ಮಳೆಗೆ ಈ ಮಣ್ಣು ಕಳಸದ ಮುಖ್ಯ ರಸ್ತೆಯುದ್ದಕ್ಕೂ ಕೊಚ್ಚಿಬಂದಿದೆ. ಶನಿವಾರ ಮುಂಜಾನೆ ರಸ್ತೆ ಕೆಸರಾದರೆ, ಬಿಸಿಲು ಹೆಚ್ಚಾಗುತ್ತಿದ್ದಂತೆ ಇಡೀ ಪಟ್ಟಣ ಧೂಳಿನ ಮಯವಾಗಿದೆ.
ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಹಾಗೂ ಶಾಸಕರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅವೈಜ್ಞಾನಿಕ ಕಾಮಗಾರಿಯನ್ನು ತಡೆದು ವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಬೇಕಿದೆ.