ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಬುಕ್ಕರಾಯ ಬಡಾವಣೆ 2ನೇ ವಾರ್ಡಿನ ಕೆಳ ಭಾಗದ ಜನವಸತಿ ಪ್ರದೇಶದಲ್ಲಿ ಕಾಂಕ್ರೀಟ್ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಭೂಮಿ ಪೂಜೆ ನೆರವೇರಿಸಿದರು. ಎಂ.ಕೆ.ವಿಜಯಕುಮಾರ್, ಮಂಜುಳಾ, ಬಿ.ಎಂ.ಗುರುಮೂರ್ತಿ, ಮಧು, ಇಮ್ರಾನ್ ಬಿಲ್ಲಳ್ಳಿ ಇತರರಿದ್ದರು.
- ವರದಿಯಿಂದ ಪ್ರಗತಿ
- ಕಾಂಕ್ರೀಟ್ ಚರಂಡಿ ಅಭಿವೃದ್ಧಿ
ತರೀಕೆರೆ: ಕ್ಷೇತ್ರದಲ್ಲಿ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರುವ ಗ್ರಾಮಗಳನ್ನು ಗುರುತಿಸಿ ರಸ್ತೆ, ಚರಂಡಿಗಳಂಥ ಅಗತ್ಯ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಬುಕ್ಕರಾಯ ಬಡಾವಣೆ 2ನೇ ವಾರ್ಡ್‌ನ ಕಾಲನಿ ಕೆಳಭಾಗದ ಜನವಸತಿ ಪ್ರದೇಶದಲ್ಲಿ 25 ಲಕ್ಷ ರೂಪಾಯಿ ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ತರೀಕೆರೆ ಹಾಗೂ ಅಜ್ಜಂಪುರ ತಾಲೂಕುಗಳನ್ನೊಳಗುಂಡಿರುವ ಕ್ಷೇತ್ರದ ಪ್ರಗತಿಗೆ ಸರ್ಕಾರ ಬಹಳಷ್ಟು ಅನುದಾನ ಬಿಡುಗಡೆ ಮಾಡುತ್ತಿದ್ದು, ಆದ್ಯತೆ ಅನುಸಾರ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಕೆಲ ದಶಕಗಳಿಂದ ಮನೆ ಮುಂದೆ ಬಚ್ಚಲು ಮನೆ, ಪಾತ್ರೆ, ಬಟ್ಟೆ ತೊಳೆಯುತ್ತಿದ್ದ ನೀರು ಸಂಗ್ರಹವಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದ ಬುಕ್ಕರಾಯ ಬಡಾವಣೆ 2ನೇ ವಾರ್ಡಿನ ಕಾಲನಿಯೊಂದರ ಕೆಳಭಾಗದಲ್ಲಿ ನೆಲೆಕಂಡುಕೊಂಡಿರುವ ನಿವಾಸಿಗಳ ಬಹು ದಿನಗಳ ಬೇಡಿಕೆಯಂತೆ ಕೊಳಚೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಲಾಗುತ್ತಿದ್ದು, ಅಲ್ಲಿನ ಬಹುತೇಕ ಸಮಸ್ಯೆ ಬಗೆಹರಿದಂತಾಗಿದೆ ಎಂದರು.
ತಾಪಂ ಇಒ ಎಂ.ಕೆ.ವಿಜಯಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಬಿ.ಎಂ.ಗುರುಮೂರ್ತಿ, ವರಲಕ್ಷ್ಮೀ, ಕವಿತಾ, ಪ್ರಮುಖರಾದ ನಿರಂಜನ್, ಮಧು, ನಾಗರಾಜ್‌ನಾಯ್ಕ, ಇಮ್ರಾನ್ ಬಿಲ್ಲಳ್ಳಿ, ನಿಂಗಪ್ಪ, ರಫೀಕ್ ಇತರರಿದ್ದರು.
ಬುಕ್ಕಾಂಬುದಿ ಬುಕ್ಕರಾಯ ಬಡಾವಣೆ 2ನೇ ವಾರ್ಡಿನ ಕಾಲನಿಯೊಂದರ ಕೆಳಭಾಗದಲ್ಲಿ ಮೂರ‌್ನಾಲ್ಕು ದಶಕಗಳಿಂದ ನೆಲೆಯೂರಿರುವ ಹೊರತಾಗಿಯೂ ರಸ್ತೆ, ಚರಂಡಿ ಇತರ ಮೂಲ ಸೌಕರ್ಯಗಳಿಂದ ವಂಚಿತರಾಗಿ ಶಾಪಗ್ರಸ್ಥ ಜೀವನ ನಡೆಸುತ್ತಿದ್ದ ನಿವಾಸಿಗಳ ಬಗೆಹರಿಯದ ಬವಣೆ ಗಮನಿಸಿದ್ದ ವಿಜಯವಾಣಿ ಜೂ.17ರಂದು ಬುಕ್ಕರಾಯ ಬಡಾವಣೆ ನಿವಾಸಿಗಳ ಬವಣೆ ಕೇಳೋರಿಲ್ಲ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ತಾಪಂ ಇಒ ಮರು ದಿನವೇ ಸಮಸ್ಯಾತ್ಮಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೆ, ಚರಂಡಿ ನಿರ್ಮಿಸಲು ಯೋಜನೆ ರೂಪಿಸಿದ್ದರು. ಮುಂದಿನ ಒಂದು ವಾರದ ಅವಧಿಯಲ್ಲೇ ಶಾಸಕ ಜಿ.ಎಚ್.ಶ್ರೀನಿವಾಸ್ 25 ಲಕ್ಷ ರೂ. ಅನುದಾನ ಮೀಸಲಿರಿಸಿ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಗಂಭೀರ ಸಮಸ್ಯೆಗೆ ಪರಿಹಾರ ಸಿಕ್ಕಿದೆ.