ಎನ್.ಆರ್.ಪುರ ತಾಪಂನಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ನಡೆಯಿತು. ಇಂದಿರಾನಗರ ರಘು, ನಾಗರಾಜ್, ಜಯರಾಂ, ಬೇಸಿಲ್, ಟಿ.ಟಿ.ಇಸ್ಮಾಯಿಲ್,ಅಪೂರ್ವ, ಹೂವಮ್ಮ, ಜಯರಾಂ ಇದ್ದರು 
ಚಿಕ್ಕಮಗಳೂರು

ನಿಮ್ಮ ಸ್ಥಳೀಯ ಸೊಸೈಟಿಗಳು, ಅನ್ನಸೇವೆ ಆ್ಯಪ್‌ನಲ್ಲಿ ಇಕೆವೈಸಿ ಮಾಡಿಸುವುದು ಕಡ್ಡಾಯ

ಎನ್.ಆರ್.ಪುರ: ಪಡಿತರ ಚೀಟಿಗೆ ಇಕೆವೈಸಿ ಮಾಡಿಸಲು ಬಾಕಿ ಇರುವವರು ಸೊಸೈಟಿ ಅಥವಾ ಅನ್ನಸೇವೆ ಆ್ಯಫ್‌ನ ಮೂಲಕವೇ ಮಾಡಿಸಬೇಕು ಎಂದು ಆಹಾರ ಇಲಾಖೆ ಅಧಿಕಾರಿ ಗಣಪತಿ ತಿಳಿಸಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿ, ತಾಲೂಕಿನಲ್ಲಿ ಶೇ.79ರಷ್ಟು ಇಕೆವೈಸಿ ಆಗಿದ್ದು, ಉಳಿದವರು ಮೊಬೈಲ್‌ನಲ್ಲಿ ಅನ್ನಸೇವೆ ಆ್ಯಫ್‌ನಲ್ಲಿ ಅಥವಾ ತಾವು ಪಡಿತರ ಪಡೆಯುವ ಸೊಸೈಟಿಯಲ್ಲಿ ಮಾಡಿಸಬೇಕು. ಇಕೆವೈಸಿ ಮಾಡಿಸಲು ನ.10ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಪ್ರಸ್ತುತ ಸೊಸೈಟಿಗಳಲ್ಲಿ ಪಡಿತರ ವಿತರಿಸತ್ತಿರುವುದರಿಂದ 1ನೇ ತಾರೀಖಿನವರೆಗೆ ಇಕೆವೈಸಿ ಮಾಡಲು ಸಾಧ್ಯವಾಗುವುದಿಲ್ಲ. ಪಡಿತರ ವಿತರಣೆ ನಂತರ ಮಾಡಿಸಬಹುದು ಎಂದರು.

ಪಡಿತರ ಚೀಟಿಯಲ್ಲಿ ಹೆಸರು ತಿದ್ದುಪಡಿ ಸೇರ್ಪಡೆಗೆ ಅವಕಾಶವಿರುತ್ತದೆ. ಹೊಸ ಪಡಿತರ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿಲ್ಲ. ಇಕೆವೈಸಿ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಈ ತಿಂಗಳು ಕೇಂದ್ರ ಸರ್ಕಾರದ ಪಡಿತರದಾರರಿಗೆ ತಲಾ 3 ಕೆಜಿ.ರಾಗಿ, 2 ಕೆಜಿ ಅಕ್ಕಿ, ರಾಜ್ಯ ಸರ್ಕಾರದ ಅನ್ನ ಭಾಗ್ಯದ 5 ಕೆಜಿ ಅಕ್ಕಿ ಬಿಡುಗಡೆಯಾಗಿದೆ.

ಚಿಕ್ಕಮಗಳೂರು ಉದ್ಯೋಗ ವಿನಿಮಯ ಕೇಂದ್ರ ಅಧಿಕಾರಿ ಖಲಂದರ್ ಮಾತನಾಡಿ, ನಿರುದ್ಯೋಗಿ ಯುವಕ, ಯುವತಿಯರಿಗೆ ಕೊಪ್ಪ ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ನೀಡಲಾಗುತ್ತಿದೆ. ಆಸಕ್ತರು ನೋಂದಣೆ ಮಾಡಿಕೊಳ್ಳಬಹು. ಉತ್ತಮ ವೇತನ, ಉತ್ತಮ ಉದ್ಯಗ ದೊರಕುವಂತಹ ಕೋರ್ಸ್‌ಗಳನ್ನು ಕಲಿಸಲಾಗುತ್ತದೆ. ಉದ್ಯೋಗ ಸೃಷ್ಟಿಸಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಮಿತಿ ಸದಸ್ಯ ಇಂದಿರಾನಗರ ರಘು ಮಾತನಾಡಿ, ಸರ್ಕಾರಿ ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ತಡವಾಗಿ ಬಂದು, ಬಸ್‌ನಿಲ್ದಾಣಕ್ಕೆ ಬರುವುದಿಲ್ಲ. ಕೆಲವು ಬಸ್ ನಿರ್ವಾಹಕರು ಪ್ರಯಾಣಿಕರೊಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ. ಅಂತಹ ಕಂಡಕ್ಟರ್‌ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ನಾಗರಾಜ್, ಕ್ಷೇತ್ರ ಕುಮಾರ್, ಬೇಸಿಲ್, ಹೂವಮ್ಮ, ಅಪೂರ್ವ, ಜಯರಾಂ, ಟಿ.ಟಿ.ಇಸ್ಮಾಯಿಲ್, ತಾಪಂ ಯೋಜನಾಧಿಕಾರಿ ಯಾದವರಾಜ್, ಸಹಾಯಕ ನಿರ್ದೇಶಕಿ ಮಂಜುಳಾ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆ ಅಧಿಕಾರಿಗಳಿದ್ದರು.

ಬಸ್‌ಸೇವೆ ಮತ್ತೆ ಆರಂಭಿಸಿ

ತಾಲೂಕು ಕೇಂದ್ರದಿಂದ ಚಿಕ್ಕಮಗಳೂರಿಗೆ ಬೆಳಗ್ಗೆ 6.15ಕ್ಕೆ ಬಿಟ್ಟರೆ ನಂತರ 8.45ಕ್ಕೆ ಬಸ್ ಇದೆ. ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ಅನೇಕ ಅಧಿಕಾರಿಗಳು, ನೌಕರರು, ಸಾರ್ವಜನಿಕರು ಸರ್ಕಾರಿ ಕಚೇರಿ ಕೆಲಸ ಕಾರ್ಯಗಳಿಗೆ ತೆರಳುತ್ತಾರೆ. ಕರೊನಾ ಸಂದರ್ಭದಲ್ಲಿ ಬೆಳಗ್ಗೆ 7.30 ಚಿಕ್ಕಮಗಳೂರು ಬಸ್ ಬಿಡಲಾಗಿತ್ತು. ಅದೇ ಬಸ್‌ಮತ್ತೆ ಚಿಕ್ಕಮಗಳೂರಿನಿಂದ ಸಂಜೆ 5.30ಕ್ಕೆ ಎನ್.ಆರ್.ಪುರಕ್ಕೆ ಬಂದು ತಂಗುತ್ತಿತ್ತು. ಈ ಬಸ್‌ನ್ನು ಮತ್ತೆ ಆರಂಭಿಸಬೇಕು ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಸಮಿತಿ ಸದಸ್ಯ ಇಂದಿರಾನಗರ ರಘು ತಿಳಿಸಿದರು. ಸದಸ್ಯೆ ಅಪೂರ್ವ ಮಾತನಾಡಿ, ಮಕ್ಕಳಿರುವ ತಾಯಂದಿರು, ಹಿರಿಯರ ಜತೆ ಕಂಡಕ್ಟರ್‌ಗಳು ಉಡಾೆಯಾಗಿ ವರ್ತಿಸುತ್ತಾರೆ. ಕಂಡಕ್ಟರ್‌ಗಳು ತಮ್ಮ ವರ್ತನೆ ಬದಲಾಯಿಸಿಕೊಳ್ಳದಿದ್ದರೆ ಪ್ರಯಾಣಿಕರೆ ಪಾಠ ಕಲಿಸುತ್ತಾರೆ ಎಂದರು.

ಶೀಘ್ರದಲ್ಲೇ ಮಾಹಿತಿ ಕಾರ್ಯಾಗಾರ

ತಾಲೂಕಿನಿಂದ ಚಿಕ್ಕಮಗಳೂರಿಗೆ ಬೆಳಗ್ಗೆ 8.00 ಗಂಟೆಗೆ ಬಸ್ ಬಿಡುವ ಬಗ್ಗೆ ಜಿಲ್ಲಾಧ್ಯಕ್ಷರ ಗಮನಕ್ಕೆ ತಂದು ಕ್ರಮವಹಿಸಲು ಸಂಬಂಧಪಟ್ಟ ಡಿಪೋ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷೆ ಕು.ಚಂದ್ರಮ್ಮ ತಿಳಿಸಿದರು. ಭಾರತ್ ಜೋಡೋ ಯುವ ಸಂಘದ ಸದಸ್ಯರುಗಳಿಗೆ ಶೀಘ್ರದಲ್ಲೇ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಹಾಗಾಗಿ ಈಗಾಗಲೇ ಭಾರತ್ ಜೋಡೋ ಯುವ ಸಂಘಗಳಿಗೆ ಎಷ್ಟು ಜನ ಮಾರ್ಗದರ್ಶಕರನ್ನು ನೇಮಿಸಲಾಗಿದೆ, ಎಷ್ಟು ಜನರು ಆನ್‌ಲೈನ್ ಹಾಗೂ ಆ್ಲೈನ್‌ನಲ್ಲಿ ನೋಂದಣೆ ಮಾಡಿಕೊಂಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಖಾಸಗಿ ಬಸ್‌ನವರ ಕಾಟ

ಸರ್ಕಾರಿ ಬಸ್‌ಗಳಿಗೆ ಖಾಸಗಿ ಬಸ್‌ಗಳ ನಿರ್ವಾಹಕರು ಮತ್ತು ಸಿಬ್ಬಂದಿಗಳ ಕಾಟ ಹೆಚ್ಚಾಗಿದೆ. ಸರ್ಕಾರಿ ಬಸ್‌ಗಳು ಬಸ್‌ನಿಲ್ದಾಣಕ್ಕೆ ಬಂದರೆ ವಿನಾಕಾರಣ ಸಿಬ್ಬಂದಿಗಳೊಂದಿಗೆ ಜಗಳಕ್ಕೆ ನಿಲ್ಲುತ್ತಾರೆ. ಇಂದು ಬೆಳಗ್ಗೆ ಬಾಳೆಹೊನ್ನೂರಿನ ಬಸ್‌ನಿಲ್ದಾಣದಲ್ಲಿ ಖಾಸಗಿ ಬಸ್‌ನ ಮೂರ‌್ನಾಲ್ಕು ಜನ ಸಿಬ್ಬಂದಿಗಳು ಸರ್ಕಾರಿ ಬಸ್ ಚಾಲಕನ ಬಟ್ಟೆ ಹರಿದು ದೈಹಿಕ ಹಲ್ಲೆ ಮಾಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಎಂದು ಡಿಪೋ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.