ಕಳಸದಲ್ಲಿ ವಾಹನಗಳಿಂದ ಸಂಚಾರ ಸಿಕ್ಕು ಉಂಟಾಗಿರುವುದು.
ಕಳಸ: ಒಂದೆಡೆ ಸುತ್ತಲೂ ಕಣ್ಣು ಹಾಯಿಸಿದಷ್ಟೂ ಹಸಿರಿನ ಪ್ರಕೃತಿ ಸೌಂದರ್ಯ, ಮತ್ತೊಂದೆಡೆ ಪವಿತ್ರ ಧಾರ್ಮಿಕ ಕ್ಷೇತ್ರಗಳು. ಸೌಲಭ್ಯ ಇಲ್ಲದಿದ್ದರೂ ತಾಲೂಕು ಕೇಂದ್ರ! ಹೊರಗಿನಿಂದ ನೋಡುವವರಿಗೆ ಕಳಸ ಎಂದರೆ ಸ್ವರ್ಗದಂತೆ ಕಾಣಬಹುದು. ಆದರೆ ಸ್ಥಳೀಯರಿಗೆ ಅಗತ್ಯವಾಗಿ ಬೇಕಿರುವುದು ಮಾತ್ರ ಏನೂ ಇಲ್ಲ ಎನ್ನುವ ಸ್ಥಿತಿ ಕಳಸದ್ದಾಗಿದೆ.
ಪಟ್ಟಣಕ್ಕೆ ಬರುತ್ತಿದ್ದಂತೆಯೇ ಬಾಯಿ ತೆರೆದು ಸ್ವಾಗತಿಸುವ ಹೊಂಡ-ಗುಂಡಿಗಳು, ಮುಗಿಯದ ರಸ್ತೆ ಕಾಮಗಾರಿಗಳು, ಉಸಿರುಗಟ್ಟಿಸುವ ಸಂಚಾರ ಸಿಕ್ಕು ಸಮಸ್ಯೆ ಇನ್ನೊಂದೆಡೆ. ಅತ್ಯಂತ ಕಿರಿದಾದ ರಸ್ತೆ ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗಿದೆ.
ದಶಕಗಳ ಹಿಂದೆ ಕಳಸದ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡಿ ಕಾಂಕ್ರೀಟ್ ಹಾಕಲಾಗಿತ್ತಾದರೂ ಅಂದು ಮಾಡಿದ ಎಡವಟ್ಟುಗಳಿಗೆ ಇಂದು ಸಾರ್ವಜನಿಕರು ದಿನನಿತ್ಯ ಪರಿತಪಿಸುವಂತಾಗಿದೆ. ಅಧಿಕಾರಿಗಳು ಮುಖ್ಯ ರಸ್ತೆಯಲ್ಲಿ ಒನ್‌ಸೈಡ್ ಪಾರ್ಕಿಂಗ್ ವ್ಯವಸ್ಥೆಯನ್ನೇನೋ ಮಾಡಿದ್ದಾರೆ. ಆದರೆ ವಾರಾಂತ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬರುವ ಪ್ರವಾಸಿಗರ ವಾಹನಗಳಿಂದಾಗಿ ರಸ್ತೆ ಸಂಚಾರ ದುಸ್ತರವಾಗಿದೆ.
ಒಂದೆಡೆ ಸ್ಥಳೀಯರ ವಾಹನಗಳು, ಮತ್ತೊಂದೆಡೆ ಪ್ರವಾಸಿಗರ ವಾಹನಗಳ ದಂಡು. ಈ ಮಧ್ಯೆ ಶಿಸ್ತಿಲ್ಲದೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವವರ ಕಾಟ. ಇದನ್ನು ಪ್ರಶ್ನಿಸಲು ಹೋದರೆ ನಮ್ಮದೇ ರಸ್ತೆ ಎಂಬಂತೆ ಪ್ರವಾಸಿಗರ ಪುಂಡಾಟಿಕೆ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಪ್ರತಿನಿತ್ಯ ಪೊಲೀಸರು ಕಳಸ ಮುಖ್ಯ ರಸ್ತೆಯುದ್ದಕ್ಕೂ ಸಿಬ್ಬಂದಿ ನಿಲ್ಲಿಸಿ ವಾಹನ ದಟ್ಟಣೆ ಸರಿಪಡಿಸುತ್ತಾರೆಯಾದರೂ, ನಿಯಮ ಉಲ್ಲಂಸಿದವರಿಗೆ ದಂಡ ವಿಧಿಸಲು ಹೋದಾಗ ಸ್ಥಳೀಯರು ನಾನು ಸ್ಥಳೀಯನೆಂಬ ದರ್ಪವಾದರೆ, ಕೆಲ ಪ್ರವಾಸಿಗರು ದೊಡ್ಡ ವ್ಯಕ್ತಿಗಳ ಕಡೆಯವರೆಂದು ಪ್ರಭಾವ ಬೀರುತ್ತಿದ್ದಾರೆ. ಇವರ ನಡುವೆ ಪೊಲೀಸರು ಹೈರಾಣಾಗುತ್ತಾರೆ.