ಬಾಳೆಹೊನ್ನೂರಿನ ಸಿಆರ್‌ಎಸ್ ಕಾಫಿ ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಅವರನ್ನು ಸಿಸಿಆರ್‌ಐ ವಿಜ್ಞಾನಿಗಳು, ಸಿಬ್ಬಂದಿ ಸನ್ಮಾನಿಸಿದರು. 
ಚಿಕ್ಕಮಗಳೂರು

ಕಾಫಿ ಬೆಳೆಗಾರರ ಅನುಕೂಲಕ್ಕಾಗಿ ಕಾಫಿ ಆ್ಯಪ್ ಬಿಡುಗಡೆ

ಬಾಳೆಹೊನ್ನೂರು: ಎಲ್ಲ ಬೆಳೆಗಾರರನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ಇಂಡಿಯಾ ಕಾಫಿ ಆ್ಯಪ್ ಬಿಡುಗಡೆ ಮಾಡಲಾಗಿದ್ದು, ಬೆಳೆಗಾರರಿಂದ ಉತ್ತಮ ಸ್ಪಂದನೆ ದೊರಕಿದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಹೇಳಿದರು.

ನ.5ರಂದು ಕಾಫಿ ಮಂಡಳಿ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ ಸಮೀಪದ ಸಿಆರ್‌ಎಸ್ ಕಾಫಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಗಾಂಶ ಕೃಷಿ ಕಾಫಿ ಗಿಡಗಳ ಉತ್ಪಾದನೆ ಆರಂಭಗೊಂಡು ಬಿಡುಗಡೆ ಪ್ರಗತಿಯಲ್ಲಿದ್ದು, ಮಾನ್ಯತೆ ಪಡೆದ ಕ್ಲೋನಲ್ ನರ್ಸರಿಗಳ ಮೂಲಕ ಗಿಡಗಳ ಉತ್ಪಾದನೆ ಹೆಚ್ಚಿಸಲಾಗಿದೆ. ದೇಶದಲ್ಲಿ 170ಕ್ಕೂ ಹೆಚ್ಚು ಾರ್ಮರ್ ಪ್ರೋಡ್ಯೂಸರ್ ಅರ್ಗನೈಸೇಶನ್ ಆರಂಭಗೊಂಡಿದ್ದು, 34 ಸಾವಿರ ರೈತರು ಇದರ ಲಾಭ ಪಡೆದಿದ್ದಾರೆ ಎಂದು ಹೇಳಿದರು.

ಎ್ಪಿಒಗಳಿಗೆ ಕಾಫಿ ಮಂಡಳಿ ಶೇ.70ರಷ್ಟು ಸಹಾಯಧನ ನೀಡುತ್ತಿದೆ. 18 ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ಸುರಕ್ಷಾ ಮತ್ತು ಶತಾಬ್ದಿ ಎಂಬ ಎರಡು ಸುಧಾರಿತ ಅರೇಬಿಕಾ ತಳಿಗಳನ್ನು ಬಿಡುಗಡೆಗೊಳಿಸಲಾಗಿದೆ. ಕಾಫಿಯಲ್ಲಿ ಯಾಂತ್ರೀಕರಣ ಬದಲಾವಣೆ ತರುವ ನಿಟ್ಟಿನಲ್ಲಿ ಎರಡು ವಿಶ್ವ ವಿದ್ಯಾನಿಲಯಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಾಫಿ ಹಣ್ಣು ಕೊಯ್ಯುವ ಯಂತ್ರ ಮುಂದಿನ ತಿಂಗಳು ಪ್ರಯೋಗಾತ್ಮಕವಾಗಿ ಇಲ್ಲಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.

ಆರಂಭದಲ್ಲಿ ಕೇಂದ್ರ ಸರ್ಕಾರ ನೀಡುತ್ತಿದ್ದ 40 ಕೋಟಿ ರೂ. ಸಹಾಯಧನ ಈಗ 90 ಕೋಟಿಗೆ ಏರಿಕೆಯಾಗಿದೆ. ಸಂಶೋಧನಾ ಕೇಂದ್ರದಲ್ಲಿ ಮೊದಲ ಬಾರಿಗೆ ಸೂಪರ್ ವೈಸರ್ ಕೋರ್ಸ್ ಹಾಗೂ ಕಾಫಿ ಎಸ್ಟೇಟ್ ಮ್ಯಾನೇಜ್‌ಮೆಂಟ್ ಡಿಪ್ಲೋಮ ತರಗತಿಗಳನ್ನು ಆರಂಭಿಸಲಾಗಿದ್ದು, ಹೊರ ರಾಜ್ಯಗಳಿಂದಲೂ ಬೇಡಿಕೆ ಬಂದಿದೆ. ಕಾಫಿ ಸಂಶೋಧನಾ ಕೇಂದ್ರದ ಆವರಣದಲ್ಲಿ 40 ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಹೊಸ ಕ್ಯಾಂಪಸ್ ಕಟ್ಟಡ ಆರಂಭಿಸಲು ಸಿದ್ಧತೆ ನಡೆಸಿದ್ದು, ಮಂಜೂರಾತಿಗೆ ಕಳುಹಿಸಲಾಗಿದೆ. ನನ್ನ ಅವಧಿಯಲ್ಲಾದ ಬದಲಾವಣೆಗಳನ್ನು ಮುಂದುವರಿಸುವುದು ಬೆಳೆಗಾರರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

15 ವರ್ಷದ ಹಿಂದೆ ಆಂಧ್ರ ಪ್ರದೇಶದಲ್ಲಿ ನಕ್ಸಲರ ದಾಳಿಯಿಂದ ಹಾನಿಯಾಗಿದ್ದ ಕಾಫಿ ಸಂಶೋಧನಾ ಕೇಂದ್ರದ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣಗೊಂಡಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ಕಾಫಿ ಮಂಡಳಿ ಮಾಜಿ ಸದಸ್ಯ ಭಾಸ್ಕರ್ ವೆನಿಲ್ಲಾ ಮಾತನಾಡಿ, ದಿನೇಶ್‌ರವರ ಅವಧಿಯಲ್ಲಿ ಕಾಫಿ ಮಂಡಳಿ ಹೊಸ ಮನ್ವಂತರ ಸೃಷ್ಟಿಸಿದೆ. ಎಲ್ಲ ರಂಗದಲ್ಲೂ ತೊಡಗಿಸಿಕೊಂಡಿರುವ ಅವರು ಮೊದಲ ಬಾರಿಗೆ ಕಾಫಿ ಸಂಶೋಧನಾ ಕೇಂದ್ರಕ್ಕೆ ಹೊಸ ಸ್ಪರ್ಷ ನೀಡಿದ್ದಾರೆ. ಶತಮಾನೋತ್ಸವ ಆಚರಣೆ ಇವರ ಅವಧಿಯಲ್ಲಿ ನಡೆದಿದ್ದು ವಿಶೇಷ. ಇವರು ಹಾಕಿರುವ ಹಲವು ಯೋಜನೆಗಳು ಪೂರ್ಣಗೊಳ್ಳಬೇಕಾದರೆ ಮುಂದಿನ ಮೂರು ವರ್ಷಗಳ ಅವಧಿಗೂ ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು ಎಂದು ಹೇಳಿದರು.

ಸಂಶೋಧನಾ ಕೇಂದ್ರದ ವಿಜ್ಞಾನಿಗಳಾದ ಡಾ.ದಿವ್ಯ, ಡಾ.ಗೋವಿಂದಪ್ಪ, ಡಾ.ಸೌಂದರ್ಯ ರಾಜನ್ ಮತ್ತಿತರರು ಉಪಸ್ಥಿತರಿದ್ದರು.