ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್
ಎನ್.ಆರ್.ಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಏ.13ರಂದು ಎನ್.ಆರ್.ಪುರಕ್ಕೆ ಆಗಮಿಸಿ ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.
ಸಿದ್ದರಾಮಯ್ಯ ಎನ್.ಆರ್.ಪುರಕ್ಕೆ ಬರುವ ಹಿನ್ನೆಲೆಯಲ್ಲಿ ಹಲವು ಬಾರಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಬಯಲು ಸೀಮೆಗೆ ನೀರು ನೀಡುವ ದೃಷ್ಟಿಯಿಂದ ಭದ್ರಾ ಡ್ಯಾಂ ಕಟ್ಟಿದ್ದರಿಂದ ಭದ್ರಾ ಹಿನ್ನೀರು ನಿಂತು ಎನ್.ಆರ್.ಪುರ ಪಟ್ಟಣ ಹಾಗೂ ಹೊನ್ನೇಕುಡಿಗೆ ಗ್ರಾಮ ಪಂಚಾಯಿತಿಯು ಬೇರ್ಪಟ್ಟವು. ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಪ್ರಯತ್ನದಿಂದ ಹೊನ್ನೇಕುಡಿಗೆ ಸೇತುವೆ ಹಾಗೂ ರಸ್ತೆಗೆ ಸಿದ್ದರಾಮಯ್ಯ 38 ಕೋಟಿ ರೂ. ಬಿಡುಗಡೆ ಮಾಡಿದ್ದರಿಂದ ಹೊಸ ಸೇತುವೆ ನಿರ್ಮಾಣವಾಗಿದೆ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
ಪಟ್ಟಣದ ರಸ್ತೆ ಅಗಲೀಕರಣಕ್ಕೆ 60 ಕೋಟಿ ರೂ. ಮಂಜೂರಾಗಿದೆ. ಸಿದ್ದರಾಮಯ್ಯ ಅವರು ಸೇತುವೆ ಉದ್ಘಾಟನೆ ಹಾಗೂ ರಸ್ತೆ ಅಗಲೀಕರಣದ ಭೂಮಿ ಪೂಜೆ ಜತೆಗೆ ಶೃಂಗೇರಿ ಕ್ಷೇತ್ರದ ಹಲವಾರು ಕಾಮಗಾರಿಗಳ ಉದ್ಘಾಟನೆಯೂ ನಡೆಯಲಿದೆ. ಮುಖ್ಯಮಂತ್ರಿಯ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವರು, ಜಿಲ್ಲೆಯ ಎಲ್ಲ ಶಾಸಕರು ಆಗಮಿಸಲಿದ್ದಾರೆ ಎಂದರು.
ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಡೆದುಕೊಂಡಿದೆ. ಪಂಚ ಗ್ಯಾರಂಟಿಯನ್ನು ಸಮರ್ಪಕವಾಗಿ ಜಾರಿಗೆ ತಂದಿದೆ. ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ. ಮಾನವ-ಪ್ರಾಣಿಗಳ ಸಂಘರ್ಷದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರಿಗೆ ಮನವಿ ನೀಡಿದ ಹಿನ್ನೆಲೆಯಲ್ಲಿ ಪ್ರಾಣಿಗಳ ಹಾವಳಿ ತಡೆಗೆ ಬಜೆಟ್‌ನಲ್ಲಿ ಶಾಶ್ವತ ಪರಿಹಾರಕ್ಕೆ 1,500 ಕೋಟಿ ರೂ. ಮೀಸಲಿಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಇ.ಸಿ.ಜೋಯಿ, ಜಿಲ್ಲಾ ಉಪಾಧ್ಯಕ್ಷ ಎಚ್.ಬಿ.ರಘುವೀರ್, ತಾಲೂಕು ಪ್ರಧಾನ ಕಾರ್ಯದರ್ಶಿ ಸುನೀಲ್ಕುಮಾರ್, ಕೆಪಿಸಿಸಿ ಕೋಆರ್ಡಿನೇಟರ್ ಎಸ್.ಡಿ.ರಾಜೇಂದ್ರ, ಜಿಲ್ಲಾ ಸಮಿತಿ ಕಾರ್ಯದರ್ಶಿ ಪ್ರಶಾಂತ ಶೆಟ್ಟಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಜುಬೇದಾ, ಕೆಪಿಸಿಸಿ ಸದಸ್ಯೆ ಸಮೀರಾ ನಹೀಂ, ತಾಪಂ ಉಪಾಧ್ಯಕ್ಷ ಬೆನ್ನಿ, ನಗರ ಘಟಕದ ಅಧ್ಯಕ್ಷ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಶಿವಣ್ಣ, ಮಹಮ್ಮದ್ ವಸೀಂ, ನಂದೀಶ, ಅನೀತ್, ಮಣಿ, ನಾಗಪ್ಪ ಇದ್ದರು.