ಮೂಡಿಗೆರೆಯ ಕಿರುಗುಂದ ಗ್ರಾಪಂ ಕಚೇರಿಯಲ್ಲಿ ಬಾಲ್ಯ ವಿವಾಹ ತಡೆ ಕಾರ್ಯಕ್ರಮದಲ್ಲಿ ಬಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ನವೀನ್ ಆನೆದಿಬ್ಬ, ಕೆ.ಕೆ.ರಾಮಯ್ಯ, ಬಿ.ಎಂ.ಚಂದನ್, ಬಿ.ಎಂ.ಕೃಷ್ಣಪ್ಪ, ನಂಜಯ್ಯ ಇದ್ದರು. 
ಚಿಕ್ಕಮಗಳೂರು

ಜನಜಾಗೃತಿಯಿಂದ ಮಾತ್ರ ಬಾಲ್ಯವಿವಾಹ ತಡೆಯಲು ಸಾಧ್ಯ

ಮೂಡಿಗೆರೆ: ಬಾಲ್ಯ ವಿವಾಹ ಮುಕ್ತ ಭಾರತ ನಿರ್ಮಿಸುವುದು ಪ್ರತಿಯೊಬ್ಬರ ಹೊಣೆ. ವಧು-ವರರಿಗೆ ಸರ್ಕಾರ ನಿಗದಿಪಡಿಸಿದ ವಯಸ್ಸಿಗಿಂತ ಕಡಿಮೆ ಇದ್ದರೆ ಕಾನೂನಿನ ಪ್ರಕಾರ ಅಪರಾಧವಾಗುತ್ತದೆ ಎಂದು ಬಾಲ್ಯ ವಿವಾಹ ಮುಕ್ತ ಭಾರತ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ನವೀನ್ ಆನೆದಿಬ್ಬ ಹೇಳಿದರು.

ಕಿರುಗುಂದ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಆಶ್ರಿತ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಬಾಲ್ಯ ವಿವಾಹ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಲ್ಯ ವಿವಾಹಕ್ಕೆ ಬಲಿಯಾಗುವವರಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂಟಿ ಪಾಲಕರು ಹಾಗೂ ಪಾಲಕರಿಲ್ಲದ ಕುಟುಂಬಗಳಲ್ಲಿ ಬಾಲ್ಯವಿವಾಹಕ್ಕೆ ಒಳಗಾಗುವ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಬಾಲ್ಯ ವಿವಾಹದ ಸುಳಿವು ಸಿಕ್ಕರೆ ಸ್ಥಳೀಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಅಂತಹ ವಿವಾಹ ತಡೆಗಟ್ಟಬೇಕು. ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಹಾಳಾಗಲಿದೆ. ಈ ಕುರಿತು ಮಾಹಿತಿ ನೀಡಲು ಆತಂಕ ಪಡೆದೆ ಧೈರ್ಯವಾಗಿ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಗ್ರಾಮದ ಹಿರಿಯ ಮುಖಂಡ ಕೆ.ಕೆ.ರಾಮಯ್ಯ ಮಾತನಾಡಿ, ಯಾವುದೇ ಮಗು ಬಾಲ್ಯವಿವಾಹಕ್ಕೆ ಒಳಗಾಗುತ್ತಿದ್ದರೆ ಅದು ನಮ್ಮ ಮನೆ ಮಗು ಎಂಬ ಭಾವನೆಯಿಂದ ಬಾಲ್ಯ ವಿವಾಹ ತಡೆಗೆ ಮುಂದಾಗಬೇಕು. ಬಾಲ್ಯ ವಿವಾಹದಿಂದ ಸಮಾಜದ ಮೇಲೆ ಉಂಟಾಗುವ ದುಷ್ಪರಿಣಾಮ ತಡೆಯಲು ಎಲ್ಲರೂ ಕಂಕಣಬದ್ಧರಾಗಬೇಕು ಎಂದು ತಿಳಿಸಿದರು.

ಗ್ರಾಪಂ ಆಡಳಿತ ಅಧಿಕಾರಿ ಬಿ.ಎಂ.ಚಂದನ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 8 ದಶಕಗಳಾದರೂ ಸಮಾಜದಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಕಳವಳಕಾರಿ. ಜನಜಾಗೃತಿಯಿಂದ ಮಾತ್ರ ಬಾಲ್ಯ ವಿವಾಹ ತಡೆಯಲು ಸಾಧ್ಯ. ಬಾಲ್ಯ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆಗಳು ಹಾಗೂ ಅಂಗನವಾಡಿಗಳಿಗೆ ಪಾದರಕ್ಷೆ ಇಡುವ ಸ್ಟ್ಯಾಂಡ್‌ಗಳನ್ನು ವಿತರಿಸಲಾಯಿತು. ಪಿಡಿಒ ಬಿ.ಎಂ.ಕೃಷ್ಣಪ್ಪ, ಕಾರ್ಯದರ್ಶಿ ನಂಜಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ನಜೀರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷ ಪ್ರೇಮ, ಮುಖಂಡರಾದ ಕೆ.ಆರ್.ಲೋಕೇಶ್, ಕೆ.ಎ.ರವಿಕುಮಾರ್ ಇತರರಿದ್ದರು.