ಶತಮಾನೋತ್ಸವದ ಅಂಗವಾಗಿ ಸಂಶೋಧನಾ ಕೇಂದ್ರ ಸಂಶೋಧಿಸಿರುವ ಹೊಸ ಕಾಫಿ ತಳಿಗಳಾದ ಸಿಸಿಆರ್‌ಐ ಸುರಕ್ಷಾ, ಸಿಸಿಆರ್‌ಐ ಶತಾಬ್ಧಿ ಗಿಡಗಳನ್ನು ಸಚಿವರು, ಗಣ್ಯರು ಬಿಡುಗಡೆಗೊಳಿಸಿದರು.
ಬಾಳೆಹೊನ್ನೂರು: ಜಿಲ್ಲೆಯಲ್ಲಿ 125 ಹೊಸ ಬಿಎಸ್‌ಎನ್‌ಎಲ್ ಟವರ್‌ಗಳು ಮಂಜೂರಾಗಿದ್ದು ಇಂಧನ ಸಚಿವರು ಈ ಕಾರ್ಯಕ್ರಮದಿಂದ ತೆರಳುವ ಒಳಗೆ ಇವುಗಳಿಗೆ ವಿದ್ಯುತ್ ಮಂಜೂರಾತಿ ನೀಡಿದರೆ ಕೂಡಲೇ ಎಲ್ಲ ಟವರ್‌ಗಳನ್ನು ಅಧಿಕೃತವಾಗಿ ಚಾಲನೆಗೊಳಿಸಲು ಸಾಧ್ಯವಾಗಲಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಗಮನ ಸೆಳೆದರು. ಪಾರ್ಲಿಮೆಂಟ್‌ನಲ್ಲಿ ಕಾಫಿಯ ಪರಿಮಳ ಬಂದರೆ ಎಲ್ಲರೂ ಇದು ಚಿಕ್ಕಮಗಳೂರು ಕಾಫಿ ಎಂದು ಹೇಳುತ್ತಾರೆ. ಚಿಕ್ಕಮಗಳೂರು ಕಾಫಿಗೆ ಇಷ್ಟೊಂದು ಬೇಡಿಕೆಯಿದ್ದು ಚಿಕ್ಕಮಗಳೂರು ಕರ್ನಾಟಕದ ಕಾಶ್ಮೀರವಾಗಿ ಪ್ರಸಿದ್ಧಿ ಪಡೆದಿದೆ ಎಂದು ಬಣ್ಣಿಸಿದರು.
ಕಾಫಿ ಬೆಳೆಗಾರರನ್ನು ಕರ್ನಾಟಕ ಮರೆಯುವ ಹಾಗಿಲ್ಲ. ಕರ್ನಾಟಕ ಅಭಿವೃದ್ಧಿಗೊಳಿಸಲು ಕಾಫಿ ಬೆಳೆಗಾರರ ಕೊಡುಗೆ ಅಪಾರ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಕಾಫಿ ಬೆಳೆಗಾರರು ಹವಾಮಾನ, ಕಾರ್ಮಿಕರ ಸಮಸ್ಯೆ ಸೇರಿದಂತೆ ಬೇರೆ ಬೇರೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾಫಿ ಗಿಡಗಳಿಗೆ ಬೋರಾರ್ ಸಮಸ್ಯೆ ಅಧಿಕವಾಗಿದ್ದು, ಸಂಶೋಧನಾ ಕೇಂದ್ರ ಹೆಚ್ಚಾಗಿ ರೋಗ ರಹಿತ ಗಿಡಗಳನ್ನು ಬಿಡುಗಡೆ ಮಾಡಬೇಕಿದೆ. ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿಗೆ ಉಪಯೋಗಿಸಿದಂತೆ ಮಣ್ಣಿನ ಶಕ್ತಿ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ ಕಾಂಪೋಸ್ಟ್, ಸಗಣಿ ಗೊಬ್ಬರಗಳ ಬಳಕೆ ಮಾಡಿ ಮಣ್ಣಿನ ಶಕ್ತಿ ಹೆಚ್ಚಿಸಬೇಕಿದೆ. ಈ ಹಿಂದೆ ರಾಜ್ಯದಲ್ಲಿದ್ದ ಕುಸುಮ್ ಬಿ, ಸಿ ಯೋಜನೆಗಳು ರದ್ದಾಗಿದ್ದು ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಗಮನಸೆಳೆದಾಗ ಅವುಗಳನ್ನು ಮತ್ತೆ ಆರಂಭಿಸಿದ್ದಾರೆ. ಬೆಳೆಗಾರರ ಜಮೀನುಗಳಿಗೆ 500 ಮೀಟರ್ ಒಳಗೆ ವಿದ್ಯುತ್ ಸಂಪರ್ಕ ನೀಡಲು 4.50 ಲಕ್ಷ ಅರ್ಜಿಗಳು ನಾವು ಅಧಿಕಾರಕ್ಕೆ ಬಂದಾಗ ಬಾಕಿಯಿತ್ತು. ಇದರಲ್ಲಿ 3.50 ಲಕ್ಷ ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದು ತಿಳಿಸಿದರು.