ಮೂಡಿಗೆರೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹದ ಕೊಳಚೆ ನೀರು. 
ಚಿಕ್ಕಮಗಳೂರು

ಸಿಎಂ ಕಚೇರಿಗೆ ಸುಳ್ಳು ಮಾಹಿತಿ ನೀಡಿದ ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಅಧಿಕಾರಿಗಳು

ಮೂಡಿಗೆರೆ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶೌಚಗೃಹದ ಆರ್‌ಸಿಸಿ ಸೆಫ್ಟಿಕ್ ಟ್ಯಾಂಕ್‌ನಿಂದ ಘನತ್ಯಾಜ್ಯ ಮತ್ತು ಕೊಳಚೆ ನೀರನ್ನು ಖಾಲಿ ಮಾಡಿಸಿ ಹೊಯ್ಸಳ ಕ್ರೀಡಾಂಗಣಕ್ಕೆ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳ ತಪ್ಪು ಮಾಹಿತಿ ನೀಡಿದ್ದಾರೆ. ಹೊಯ್ಸಳ ಕ್ರೀಡಾಂಗಣಕ್ಕೆ ಈಗಲೂ ಬಸ್‌ನಿಲ್ದಾಣದ ಸೆಪ್ಟಿಕ್ ಟ್ಯಾಂಕ್‌ನ ಕೊಳಚೆ ನೀರು ಹರಿಯುತ್ತಿದೆ.

ಕಳೆದ ತಿಂಗಳು ಈ ಬಗ್ಗೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಗಮನಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಚಿವಾಲಯದ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ ಸೆಪ್ಟಿಕ್ ಟ್ಯಾಂಕ್‌ನಿಂದ ಕ್ರೀಡಾಂಗಣಕ್ಕೆ ಹರಿಯುತ್ತಿರುವ ಕೊಳಚೆ ನೀರನ್ನು ತಡೆಗಟ್ಟುವಂತೆ ಹಾಗೂ ತೆಗೆದುಕೊಂಡಿರುವ ಕ್ರಮದ ಬಗ್ಗೆ ಶೀಘ್ರವಾಗಿ ಅನುಪಾಲನ ವರದಿ ನೀಡುವಂತೆ ಚಿಕ್ಕಮಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿಗೆ ಸೂಚನೆ ನೀಡಿದ್ದರು. ಅದರಂತೆ ಸೆಫ್ಟಿಕ್ ಟ್ಯಾಂಕ್‌ನಿಂದ ಘನತ್ಯಾಜ್ಯ ಮತ್ತು ಕೊಳಚೆ ನೀರು ಖಾಲಿ ಮಾಡಲಾಗಿದೆ. ಮುಂದೆ ಕಾಲಕಾಲಕ್ಕೆ ಗುತ್ತಿಗೆದಾರರ ಮೂಲಕ ನಿರಂತರವಾಗಿ ಖಾಲಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗೆ ಅನುಪಾಲನ ವರದಿ ಸಲ್ಲಿಸಿದ್ದರು.

ಅದರೆ ಹೊಯ್ಸಳ ಕ್ರೀಡಾಂಗಣಕ್ಕೆ ಹರಿಯುತ್ತಿರುವ ಕೊಳಚೆ ನೀರು ಇನ್ನೂ ಹರಿಯುತ್ತಿದೆ. ಮೂಡಿಗೆರೆ ಬಸ್‌ನಿಲ್ದಾಣ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಮಳೆ ನೀರು ಸೆಪ್ಟಿಕ್‌ಟ್ಯಾಂಕ್ ಇರುವ ಸ್ಥಳಕ್ಕೆ ಹರಿಯುತ್ತದೆ. ಮಳೆ ನೀರಿನೊಂದಿಗೆ ಹಳೆ ಸೆಪ್ಟಿಕ್ ಟ್ಯಾಂಕ್ ಗಟ್ಟಿಯಾಗಿರುವ ಘನತ್ಯಾಜ್ಯ ಮಿಶ್ರಣವಾಗಿ ತಡೆಗೋಡೆ ಮೂಲಕ ಕ್ರೀಡಾಂಗಣಕ್ಕೆ ಸೋರಿಕೆಯಾಗುತ್ತದೆ ಇದನ್ನು ತಡೆಗಟ್ಟಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿವರಣೆ ನೀಡಿದ್ದರು.

ಅದರೆ ವಾಸ್ತವವಾಗಿ ಬಸ್‌ನಿಲ್ದಾಣ ಎತ್ತರದಲ್ಲಿದೆ. ಮಳೆನೀರು ಸೆಪ್ಟಿಕ್ ಟ್ಯಾಂಕ್ ಸಮೀಪಕ್ಕೆ ಹರಿಯುತ್ತಿಲ್ಲ. ಅಧಿಕಾರಿಗಳು ತಪ್ಪು ವಿವರಣೆ ನೀಡಿದ್ದಾರೆ. ಈಗ ಮಳೆ ಇಲ್ಲದಿದ್ದರೂ ಹೊಯ್ಸಳ ಕ್ರೀಡಾಂಗಣಕ್ಕೆ ಮಾತ್ರ ಹಿಂದಿನಂತೆ ಹರಿಯುತ್ತಿದೆ. ಕ್ರೀಡಾಂಗಣದಲ್ಲಿ ವಾಯುವಿಹಾರ ನಡೆಸುವವರು, ಕ್ರೀಡಾಪಟುಗಳು ಸಾರ್ವಜನಿಕರು, ಮೂಗು ಮುಚ್ಚಿಕೊಂಡು ಚಟುವಟಿಕೆ ನಡೆಸಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಚಿವಾಲಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೂಡಿಗೆರೆ ಬಸ್ ನಿಲ್ದಾಣದ ಶೌಚಗೃಹದ ಸೆಪ್ಟಿಕ್ ಟ್ಯಾಂಕ್‌ನ ಘನತ್ಯಾಜ್ಯ ಮತ್ತು ಕೊಳಚೆ ನೀರನ್ನು ಖಾಲಿ ಮಾಡಿಸಿ ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ವರದಿ ನೀಡಲಾಗಿದೆ. ಸೆಪ್ಟಿಕ್ ಟ್ಯಾಂಕ್‌ನಿಂದ ಮತ್ತೆ ಕೊಳಚೆ ನೀರು ಹರಿಯುತ್ತಿರುವ ಬಗ್ಗೆ ಶನಿವಾರ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಯ್ಸಳ ಕ್ರೀಡಾಂಗಣಕ್ಕೆ ಕೊಳಚೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗುವುದು
ಸತೀಶ್ ಕೆಎಸ್‌ಆರ್‌ಟಿಸಿ ಚಿಕ್ಕಮಗಳೂರು ಡಿಸಿ