ಕೊಪ್ಪದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ ರಾಘವೇಂದ್ರ ಅವರಿಗೆ ಹೆಚ್.ಜಿ ಗೋವಿಂದೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕೊಪ್ಪ: ಪತ್ರಕರ್ತರು ಸುದ್ದಿಗಳನ್ನು ಬಿತ್ತರಿಸುವ ಮೊದಲು ಅದರ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸತ್ಯವನ್ನು ಪಾಲಿಸುವುದು ಪ್ರತಿಯೊಬ್ಬ ಪತ್ರಕರ್ತನ ಧರ್ಮ. ಪತ್ರಕರ್ತರು ಸಮಾಜದ ದಾರಿದೀಪವಾಗಬೇಕೆ ಹೊರತು ವೈಯುಕ್ತಿಕ ಹಿತಾಸಕ್ತಿಗಾಗಿ ಯಾವುದೇ ವ್ಯಕ್ತಿ ಅಥವಾ ಕುಟುಂಬಕ್ಕೆ ಅನ್ಯಾವಾಗದಂತೆ ಸುದ್ದಿ ಪ್ರಕಟಿಸಬಾರದು ಎಂದು ತಿಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಕರ್ತರ ಹಕ್ಕುಗಳ ರಕ್ಷಣೆ ಮತ್ತು ವೃತ್ತಿಪರ ಗೌರವಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ. ಆ ಗೌರವಕ್ಕೆ ಧಕ್ಕೆಯಾಗದಂತೆ ಪ್ರತಿಯೊಬ್ಬ ಪತ್ರಕರ್ತರೂ ಸತ್ಯ ಹಾಗೂ ಜವಾಬ್ದಾರಿಯುತ ಸುದ್ದಿಗಳನ್ನು ಸಮಾಜಕ್ಕೆ ತಲುಪಿಸಬೇಕು. ರಾಜ್ಯದಲ್ಲಿ ಸಂಘ 10 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷ ಮಾದನ ಗೌಡ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪರಿಶೀಲಿಸದ ಹಾಗೂ ಸುಳ್ಳು ಸುದ್ದಿಗಳು ವೇಗವಾಗಿ ಹರಡುತ್ತಿರುವುದು ಆತಂಕಕಾರಿ ಬೆಳವಣಿಗೆ. ನೈಜ ಮಾಹಿತಿ ಹಾಗೂ ದೃಢೀಕರಿಸಿದ ಸುದ್ದಿಗಳನ್ನು ಮಾತ್ರ ಜನರೊಂದಿಗೆ ಹಂಚಿಕೊಳ್ಳುವುದು ಪತ್ರಕರ್ತರ ಹೊಣೆಗಾರಿಕೆಯಾಗಿದೆ ಎಂದರು.
ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಮಲೆನಾಡ ಗಾಂಧಿ ಹೆಚ್.ಜಿ ಗೋವಿಂದಗೌಡರ ಕುರಿತು ಮಾತನಾಡಿ, ಗೋವಿಂದಗೌಡರು ಪ್ರಾಮಾಣಿಕ ರಾಜಕಾರಣಿಯಾಗಿದ್ದರು. ಯಾವುದೇ ಅನ್ಯಾಯ ಮತ್ತು ಅಕ್ರಮದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅಧಿಕಾರಿಗಳಿಂದಲೂ ಅಪಾರ ಗೌರವ ಪಡೆದಿದ್ದ ಅವರ ಜನಪರ ಬದುಕು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ ಎಂದು ಸ್ಮರಿಸಿದರು.
ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷ ಆನಂದ್ ಅನಿಲ್, ಕೊಪ್ಪ ತಾಲೂಕು ಅಧ್ಯಕ್ಷ ಜಿನೇಶ್ ಇರ್ವತ್ತೂರು, ಹೆಚ್.ಜಿ ವೆಂಕಟೇಶ್, ಪತ್ರಕರ್ತ ಡಿ.ಎಸ್.ವಿಶ್ವನಾಥ ಶೆಟ್ಟಿ, ವೈದ್ಯ ಡಾ.ಉದಯ ಶಂಕರ್, ದಾನಿ ಎಲ್.ಎಂ ಪ್ರಕಾಶ್ ಕೌರಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯ ರಾಘವೇಂದ್ರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, ಪತ್ರಕರ್ತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.