ಶೃಂಗೇರಿ ತಾಲೂಕಿನ ಕಿಗ್ಗಾದ ಶ್ರೀ ಶಾಂತಾ ಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ನೂತನವಾಗಿ ನಿರ್ಮಿಸಲಾದ ಚಿಕ್ಕ ರಥವನ್ನು ಶಾಸಕ ಟಿ.ಡಿ.ರಾಜೇಗೌಡ ಸಮರ್ಪಿಸಿದರು. ರಮೇಶ್ ಭಟ್, ದಿನೇಶ್ ಶೆಟ್ಟಿ, ಕೆ.ಆರ್.ವೆಂಕಟೇಶ್ ಇದ್ದರು. 
ಚಿಕ್ಕಮಗಳೂರು

ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ರಥ ಸಮರ್ಪಣೆ

ಶೃಂಗೇರಿ: ಮಳೆಯ ದೇವರೆಂದೇ ಹೆಸರಾಗಿರುವ ಶ್ರೀ ಶಾಂತಾಸಮೇತ ಋಷ್ಯಶೃಂಗೇಶ್ವರ ಸ್ವಾಮಿ ದೇವಾಲಯಕ್ಕೆ ನೂತನ ಚಿಕ್ಕ ರಥವನ್ನು ಶಾಸಕ ಟಿ.ಡಿ.ರಾಜೇಗೌಡ ಶನಿವಾರ ಸಮರ್ಪಿಸಿದರು.
50 ವರ್ಷಕ್ಕೂ ಹಿಂದೆ ನಿರ್ಮಿಸಲಾಗಿದ್ದ ರಥ ಶಿಥಿಲವಾಗಿದ್ದು ದೇವಸ್ಥಾನದ ಆಡಳಿತ ಮಂಡಳಿ ಕೋರಿಕೆಯಂತೆ ನೂತನವಾಗಿ ರಥ ಸಿದ್ಧಪಡಿಸಲಾಗಿದೆ. ಕಿಗ್ಗಾ ಸಮೀಪದ ಸೂರ‌್ಗೋಡು ಶಿಲ್ಪಿ ಚೇತನ ಆಚಾರ್ಯ ಮತ್ತು ತಂಡ ಸುಂದರವಾಗಿ ನಿರ್ಮಿಸಿದೆ. ಪ್ರತಿ ವರ್ಷದಂತೆ ಧನುರ್ಮಾಸದಲ್ಲಿ ಚಿಕ್ಕ ರಥೋತ್ಸವ ನಡೆಯಲಿದ್ದು, ಅಂದು ರಥವನ್ನು ಬಳಸಲಾಗುತ್ತದೆ. ಡಿ.18ರ ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಚತುರ್ದಶಿ ದಿನ ಧನುರ್ಮಾಸದ ಎರಡನೇ ದಿನ ರಥ ಎಳೆಯಲಾಗುತ್ತದೆ ಎಂದರು.
ಈ ಹಿಂದೆ ಶ್ರೀ ಶಾಂತಮ್ಮ ದೇಗುಲದ ಒಳಗೆ ಮಳೆಗಾಲದಲ್ಲಿ ಮಳೆಯ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಭಕ್ತಾದಿಗಳಿಗೆ ಅನಾನುಕೂಲವಾಗುತ್ತಿತ್ತು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಳಜಿಯಿಂದ ದೇವಸ್ಥಾನಕ್ಕೆ ತಾಮ್ರದ ಮೇಲು ಹೋದಿಕೆ ಮಾಡಲಾಗಿದ್ದು ಇದರಿಂದ ಶಾಶ್ವತ ಪರಿಹಾರ ದೊರಕಿದೆ ಎಂದರು.
ದೇವಸ್ಥಾನದ ಅರ್ಚಕರಾದ ಶಿವರಾಮ ಭಟ್ ಮತ್ತು ವಿಶ್ವನಾಥ ಭಟ್ಟ ನೇತೃತ್ವದಲ್ಲಿ ರಥಕ್ಕೆ ಧಾರ್ಮಿಕ ಪೂಜಾ ವಿಧಿ ವಿಧಾನ ನೆರವೇರಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥ್, ತಹಸೀಲ್ದಾರ್ ಅನೂಪ್ ಸಂಜೋಗ್, ಸಮಿತಿ ಸದಸ್ಯರು, ಶ್ಯಾನುಭೋಗ್ ಅರುಣಾಚಲಾ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್, ಮುಖಂಡರಾದ ಎಚ್.ಕೆ.ದಿನೇಶ್ ಹೆಗ್ಡೆ, ರಾಜಕುಮಾರ್ ಹೆಗ್ಡೆ, ಕೆ.ಆರ್.ವೆಂಕಟೇಶ್, ಪುಟ್ಟಪ್ಪ ಹೆಗ್ಡೆ, ಕೆ.ಎಂ.ರಾಮಣ್ಣ, ಗುತ್ತಳಿಕೆ ಕೇಶವ್, ರಾಜೇಶ್ ದ್ಯಾವಂಟು, ದಿನೇಶ್ ಶೆಟ್ಟಿ ಇತರರಿದ್ದರು.