ತರೀಕೆರೆ: ಪ್ರಾಕೃತಿಕ ಸೊಬಗಿನ ಕೆಮ್ಮಣ್ಣುಗುಂಡಿ ಗಿರಿಧಾಮ, ಭಾಗಶಃ ನಿತ್ಯಧಾರೆ ಹರಿಸುವ ಹೆಬ್ಬೆ, ಕಲ್ಲತ್ತಿ ಜಲಪಾತ, ವನ್ಯಜೀವಿ ಜತೆ ಹಚ್ಚಹಸಿರಿನ ವನಸಿರಿಯಿಂದ ಕಂಗೊಳಿಸುತ್ತಿರುವ ಲಕ್ಕವಳ್ಳಿ ಭದ್ರಾ ಅಭಯಾರಣ್ಯ ತಾಲೂಕಿನ ಘನತೆ ಹೆಚ್ಚಿಸಿದೆ. ಆದರೆ ತಾಲೂಕು ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಪ್ರಖ್ಯಾತಿ ಪಡೆದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಪ್ರೇಕ್ಷಣೀಯ ತಾಣ ಕೆಮ್ಮಣ್ಣುಗುಂಡಿ ಗಿರಿಧಾಮ, ಲಕ್ಕವಳ್ಳಿ ಭದ್ರಾ ಅಭಯಾರಣ್ಯ, ರಾಜ್ಯದ ನಾನಾ ಭಾಗಗಳ ಜನ ಪವಿತ್ರ ತೀರ್ಥ ಸ್ನಾನ ಮಾಡಲು ಬಯಸುವ ಕಲ್ಲತ್ತಿ ಜಲಪಾತದ ಜತೆ ಶಿಲ್ಪಕಲೆ ನೋಡಲು ಬರುವ ಮಂದಿಗೆ ಅಲ್ಲಿ ಅವ್ಯವಸ್ಥೆಯಿಂದ ಕೂಡಿರುವ ಹಲವು ಸಮಸ್ಯೆಗಳು ನಿರಾಸೆ ಮೂಡಿಸುತ್ತಿವೆ.
ಪ್ರವಾಸೋದ್ಯಮಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿಕೊಳ್ಳುತ್ತಿದೆಯಾದರೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ದುಸ್ಥಿತಿ, ಶೌಚಗೃಹ, ಕುಡಿಯುವ ನೀರು ಸೇರಿ ಇತರ ಅಗತ್ಯ ಸೌಕರ್ಯ ಒದಗಿಸಲು ಸಹ ಆಸಕ್ತಿ ತೋರದೆ ಇರುವುದು ಸರ್ಕಾರದ ನಿರ್ಲಕ್ಷೃಕ್ಕೆ ಸಾಕ್ಷಿಯಾಗಿದೆ.
ಕೆಮ್ಮಣ್ಣುಗುಂಡಿ ಶ್ರೀ ಕೃಷ್ಣರಾಜೇಂದ್ರ ಗಿರಿಧಾಮ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ರವೇಶದ್ವಾರದಲ್ಲಿ ನಿಗದಿ ಮಾಡಿರುವ ವಾಹನ ಶುಲ್ಕ, ಜಂಗಲ್ ರೆಸಾರ್ಟ್ ಅಧೀನದ ಹೋಟೆಲ್‌ಗಳಲ್ಲಿ ತಿಂಡಿ, ತಿನಿಸು, ಊಟಕ್ಕೆ ವಿಧಿಸುವ ದುಬಾರಿ ದರ ಭಾರವೆನಿಸಿದೆಯಲ್ಲದೆ, ವ್ಯವಸ್ಥಿತ ಶೌಚಗೃಹ ಸೌಲಭ್ಯ ಸಹ ಕಲ್ಪಿಸಿಲ್ಲ. ಇನ್ನು ಲಕ್ಕವಳ್ಳಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಜತೆ ಹೆಬ್ಬೆ ಜಲಪಾತಕ್ಕೆ ಹದಗೆಟ್ಟ ರಸ್ತೆಯಲ್ಲೇ ಸಾಗಬೇಕಾಗಿದೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಕಲ್ಲತ್ತಿಗಿರಿ, ಕೆಮ್ಮಣ್ಣುಗುಂಡಿ ಗಿರಿಶ್ರೇಣಿಗಳ ರುದ್ರ ರಮಣೀಯ ದೃಶ್ಯ ವೈಭವ ಕಣ್ತುಂಬಿಕೊಳ್ಳಲು ರಾಜ್ಯ, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಬಂದು ಹೋಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಇಲ್ಲಿಗೆ ಬರುವ ಅಸಂಖ್ಯಾತ ಪ್ರವಾಸಿಗರಿಂದಲೇ ಗಿರಿಶ್ರೇಣಿಯ ಪರಿಸರಕ್ಕೆ ಧಕ್ಕೆ ಉಂಟಾಗುತ್ತಿದೆ. ಕೆಲವರು ಮದ್ಯದ ಬಾಟಲಿ ಜತೆ ವಿವಿಧ ಖಾದ್ಯಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಹೊತ್ತು ತರುತ್ತಾರಲ್ಲದೆ, ಎಲ್ಲೆಂದರಲ್ಲಿ ತ್ಯಾಜ್ಯಗಳನ್ನು ಎಸೆದು ಸುಂದರ ಪರಿಸರ ಕಲುಷಿತಗೊಳಿಸುತ್ತಿದ್ದಾರೆ.