ಮೂಡಿಗೆರೆ ಪಟ್ಟಣದ ಬಡಾವಣೆ ರಸ್ತೆಯಲ್ಲಿ ಅಮೃತ್ ಕುಡಿಯುವ ನೀರಿನ ಯೋಜನೆಯ ಪೈಪ್ ಅಳವಡಿಸಲು ಕಾರ್ಮಿಕರು ಗುಂಡಿ ಅಗೆದಿರುವುದು. 
ಚಿಕ್ಕಮಗಳೂರು

ನೀರಿನ ಪೈಪ್ ಅಳವಡಿಕೆಯಲ್ಲಿ ಅವ್ಯವಸ್ಥೆ

ಜಿ. ಗಜೇಂದ್ರ
ಮೂಡಿಗೆರೆ: ಅಮೃತ್ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ಕಾಂಕ್ರೀಟ್ ರಸ್ತೆಯ ಅಲ್ಲಲ್ಲಿ ಗುಂಡಿ ಅಗೆದು ಅದಕ್ಕೆ ಮತ್ತೆ ಕಾಂಕ್ರೀಟ್ ಹಾಕಲು ವರ್ಷಗಟ್ಟಲೆ ಸಮಯ ತೆಗೆದುಕೊಳ್ಳುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. 
 ಕಳೆದ ಒಂದೂವರೆ ವರ್ಷದಿಂದ ಪಟ್ಟಣದ ರಸ್ತೆಗಳಲ್ಲಿ ಪೈಪ್ ಅಳವಡಿಕೆ ಕಾರ್ಯ ನಿಧಾನಗತಿಯಲ್ಲಿ ನಡೆದಿದೆ. ರಸ್ತೆಯುದ್ದಕ್ಕೂ 5ರಿಂದ 10 ಮೀಟರ್ ದೂರದ ಅಲ್ಲಲ್ಲಿ ಕಾಂಕ್ರೀಟ್ ರಸ್ತೆಗೆ ಅಡ್ಡಲಾಗಿ ಪೈಪ್ ಅಳವಡಿಸಲಾಗಿದೆ. ಆದರೆ ಗುಂಡಿ ಮುಚ್ಚದೆ ಹಾಗೆಯೇ ಬಿಡಲಾಗಿತ್ತು. ಇದೀಗ 1 ತಿಂಗಳಿನಿಂದ ಕಾಂಕ್ರೀಟ್ ಹಾಕಿ ಗುಂಡಿಯನ್ನು ಮುಚ್ಚಲು ಗುತ್ತಿಗೆದಾರರು ಮುಂದಾಗಿದ್ದಾರೆ.
ಪಟ್ಟಣದ ಛತ್ರ ಮೈದಾನ ಬಡಾವಣೆಯಲ್ಲಿ ಬಾಯಿ ತೆರೆದುಕೊಂಡಿದ್ದ ಗುಂಡಿಯನ್ನು ಕಾಂಕ್ರೀಟ್‌ನಿಂದ ಮುಚ್ಚಲಾಗಿದೆ. ಉಳಿದಂತೆ ಮಾರ್ಕೆಟ್ ರಸ್ತೆ, ಪಿಟಿ ರಸ್ತೆ, ಕುರುಕಮಕ್ಕಿ ಬಡಾವಣೆ, ದೊಡ್ಡಿಬೀದಿ, ಜೆ.ಎಂ.ರಸ್ತೆ, ಎಂ.ಜಿ.ರಸ್ತೆ, ಅಜಾದ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಗುಂಡಿ ಬಾಯಿ ತೆರೆದುಕೊಂಡಿದೆ. ಅಮೃತ್ ಯೋಜನೆಯ ಇಂಜಿನಿಯರ್ ಮತ್ತು ಗುತ್ತಿಗೆದಾರರನ್ನು ಪ್ರಶ್ನಿಸಿದರೆ ಒಂದೆರಡು ದಿನದಲ್ಲಿ ಗುಂಡಿಯನ್ನು ಮುಚ್ಚಲಾಗುವುದು ಎನ್ನುತ್ತಾರೆ. ಆದರೆ 1 ವರ್ಷದಿಂದ ಗುಂಡಿಯನ್ನು ಮುಚ್ಚದೆ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದಾರೆ.
ಕಾಂಕ್ರೀಟ್ ರಸ್ತೆಯಲ್ಲಿ 1 ಅಡಿ ಆಳದ ಗುಂಡಿ ಅಗೆದು ಪೈಪ್ ಅಳವಡಿಸಿದ ಬಳಿಕ  ಒಂದಷ್ಟು ಮಣ್ಣು ಹಾಕಲಾಗಿದೆ. ಅರ್ಧ ಅಡಿ ಗುಂಡಿ ಬಾಯಿ ತೆರೆದುಕೊಂಡಿದೆ. ಈಗ ಆ ಗುಂಡಿಗೆ ಛತ್ರಮೈದಾನ ಬಡಾವಣೆಯಲ್ಲಿ ಜಲ್ಲಿ ಹಾಕಿ 2 ಇಂಚು ಮಾತ್ರ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ. ಒಂದು ಅಡಿ ಕಾಂಕ್ರೀಟ್ ರಸ್ತೆಯನ್ನು ಅಗೆದು 2 ಇಂಚು ಮಾತ್ರ ಕಾಂಕ್ರೀಟ್ ಹಾಕುತ್ತಿರುವುದರಿಂದ ಮಳೆ ಆರಂಭವಾದರೆ ಗುಂಡಿಗೆ ಹಾಕಿರುವ ಕಾಂಕ್ರೀಟ್ ಕೊಚ್ಚಿಹೋಗಿ ಮತ್ತೆ ಗುಂಡಿ ಹಾಗೆಯೇ ಉಳಿಯುವ ಆತಂಕವಿದೆ.