ಅಜ್ಜಂಪುರದ ತ್ಯಾಗದಕಟ್ಟೆ ಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ 7ನೇ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಜಿ.ಬಿ.ಸುರೇಶ್ ಉದ್ಘಾಟಿಸಿದರು.  
ಚಿಕ್ಕಮಗಳೂರು

ಜಾನಪದ ಸಮ್ಮೇಳನಕ್ಕೆ ಚಂದ್ರ ಪ್ರಕಾಶ್ ಸಮ್ಮೇಳನಾಧ್ಯಕ್ಷ

ಕಡೂರು: ಗಡಿಹಳ್ಳಿಯಲ್ಲಿ ನಡೆಯಲಿರುವ ತಾಲೂಕು ಜಾನಪದ ಸಮ್ಮೇಳನದ ಅಧ್ಯಕ್ಷರಾಗಿ ತ್ಯಾಗದಕಟ್ಟೆಯ ಚಂದ್ರಪ್ರಕಾಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ತಿಳಿಸಿದರು.
ತ್ಯಾಗದಕಟ್ಟೆ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ 7ನೇ ಸಮ್ಮೇಳನದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ, ಗೀಗಿಪದ, ತತ್ವಪದ ಹಾಡುಗಾರ ಹಾಗೂ ಜಾನಪದ ಕಲಾ ಪೋಷಕರಾಗಿ ಕಾರ್ಯನಿರ್ವಹಿಸುತ್ತಿರುವ ತ್ಯಾಗದ ಕಟ್ಟೆ ಚಂದ್ರಪ್ರಕಾಶ್ ಸಾವಿರಾರು ಒಗಟು, ಗಾದೆಗಳನ್ನು ಸಂಗ್ರಹಿಸಿದ್ದಾರೆ. ಜಾನಪದ ಸಾಹಿತ್ಯ, ಸಂಸ್ಕೃತಿ ಕಲೆಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ರಚಿಸಿದ್ದಾರೆ ಎಂದರು.
ಇತ್ತೀಚಿನ ದಿನಗಳಲ್ಲಿ ಜಾನಪದ ಸಾಹಿತ್ಯ ಸಂಸ್ಕೃತಿ, ಕಲೆ ನಶಿಸುತ್ತಿರುವ ಸಂದರ್ಭದಲ್ಲಿ ಗಡಿಹಳ್ಳಿ ಜಾನಪದ ಕಲಾಪೋಷಕ ಮಂಜಣ್ಣ ಮತ್ತು ತಂಡದ ನೇತೃತ್ವದಲ್ಲಿ ಎಲ್ಲ ರೀತಿಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ. ಇದೇ ರೀತಿ ಜಿಲ್ಲೆಯಾದ್ಯಂತ ಎಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ಜಾನಪದ ಸಮ್ಮೇಳನಗಳು ಸಾಹಿತ್ಯ, ಸಂಗೀತ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ನಮ್ಮ ಪೂರ್ವಜರು ಉಳಿಸಿ ಬೆಳೆಸಿಕೊಂಡು ಬಂದಿರುವ ಜಾನಪದ ಸಂಸ್ಕೃತಿಯನ್ನು ಜೀವಂತಿಕೆಯಿಂದ ಇಡಲು ಮತ್ತು ಸ್ವಾಸ್ಥ್ಯ ಸಮಾಜ ಕಾಪಾಡಲು ಮುಂದಾಗಬೇಕಿದೆ ಎಂದರು.
ಜಾನಪದ ಪರಿಷತ್‌ನ ಅಜ್ಜಂಪುರ ತಾಲೂಕು ಗೌರವಾಧ್ಯಕ್ಷ ಮರಳು ಸಿದ್ದಪ್ಪ , ಜಿಲ್ಲಾ ಸಂಚಾಲಕಿ ಗಾಯತ್ರಮ್ಮ, ಸಾಹಿತಿ ದಂದೂರು ರಾಜಣ್ಣ, ತ್ಯಾಗದ ಕಟ್ಟೆ ಸಾಹಿತಿ ತಿಪ್ಪೇಶ್, ವಿಜಯಕುಮಾರಿ, ತಾಲೂಕು ಅಧ್ಯಕ್ಷ ಡಾ.ಮಾಳೇನಳ್ಳಿ ಬಸಪ್ಪ, ಶಿವನಿ ಹೋಬಳಿ ಅಧ್ಯಕ್ಷ ಕಾರಹಳ್ಳಿ ಬಸಪ್ಪ, ಚಿಕ್ಕನಲ್ಲೂರು ಜಯಣ್ಣ, ಜ್ಯೋತಿ, ಶಕುಂತಲಾ, ಜಯಣ್ಣ ಹಾಗೂ ಪುಪ್ಪಗಿರಿ ಮಹಿಳಾ ಸಂಘದ ಸದಸ್ಯರು ಇದ್ದರು.