ಓಣಂ ಪ್ರಯುಕ್ತ ಕಳಸದಲ್ಲಿ ಮಲಯಾಳಿಗರ ಮನೆಯೊಂದರಲ್ಲಿ ಪೂಕಳಂ ರಚಿಸಿರುವುದು. 
ಚಿಕ್ಕಮಗಳೂರು

ಮಲಯಾಳಿಗರಿಗೆ ಸಂಭ್ರಮ

ಪ್ರಮುಖ ಮುಖ್ಯಾಂಶಗಳು

  • ಓಣಂ ಭೋಜನ
  • ತಿನಿಸುಗಳನ್ನು ಸವಿದರು.
ಕಳಸ: ತಾಲೂಕಿನಾದ್ಯಂತ ನೆಲೆಸಿರುವ ಮಲಯಾಳಿಗರು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಲಯಾಳಿ ಸಮುದಾಯದವರು ಮನೆಗಳ ಆವರಣಗಳಲ್ಲಿ ವಿಶೇಷವಾಗಿ ಅಲಂಕಾರ ಮಾಡಿದ್ದರು. ವಿವಿಧ ಬಣ್ಣಗಳ ಹೂವುಗಳಿಂದ ಆಕರ್ಷಕ ಪೂಕಳಂ ರಚಿಸಿದ್ದರು.
ಹೊಸ ಬಟ್ಟೆ ಧರಿಸಿ, ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಓಣಂ ಭೋಜನವನ್ನು ಸಾಂಪ್ರದಾಯಿಕ ರೀತಿಯಲ್ಲಿ ಬಡಿಸಲಾಯಿತು. ಬಾಳೆ ಎಲೆಯಲ್ಲಿ ವಿವಿಧ ಬಗೆಯ ಸಸ್ಯಾಹಾರಿ ಖಾದ್ಯಗಳು, ಪಾಯಸ, ಹಲವು ಬಗೆಯ ತಿನಿಸುಗಳನ್ನು ಸವಿದರು. ಕುಟುಂಬಸ್ಥರು ಹಾಗೂ ಬಂಧು-ಬಳಗ, ನೆರೆ ಹೊರೆಯವರು ಮತ್ತು ಸ್ನೇಹಿತರು ಒಟ್ಟಾಗಿ ಕುಳಿತು ಭೋಜನ ಸವಿದರು. 
ಕಳಸ ತಾಲೂಕಿನಲ್ಲಿ ಉದ್ಯೋಗ, ವ್ಯಾಪಾರ ಹಾಗೂ ವಿವಿಧ ವೃತ್ತಿಗಳ ಹಿನ್ನೆಲೆಯಲ್ಲಿ ಹಲವು ವಷರ್ಗಳಿಂದ ನೆಲೆಸಿರುವ ಮಲಯಾಳಿ ಕುಟುಂಬಗಳು ಪ್ರತಿ ವರ್ಷವೂ ಓಣಂ ಹಬ್ಬವನ್ನು ಒಗ್ಗಟ್ಟಿನಿಂದ ಆಚರಿಸುತ್ತಿದ್ದು, ಈ ಬಾರಿಯೂ ಸಂಪ್ರದಾಯ ಮತ್ತು ಸಂಸ್ಕೃತಿ ಉಳಿಸಿಕೊಂಡು ಹಬ್ಬ ಆಚರಿಸಿರುವುದು ವಿಶೇಷವಾಗಿತ್ತು.
ಓಣಂ ಆಚರಣೆ ಮೂಲಕ ಸಹೋದರತ್ವ, ಸಾಮರಸ್ಯ, ಸಮಾನತೆ ಹಾಗೂ ಪ್ರೀತಿ ಸಂದೇಶ ಸಾರಲಾಯಿತು. ಕನ್ನಡಿಗರು ಸೇರಿದಂತೆ ವಿವಿಧ ಸಮುದಾಯಗಳ ಜನರು ಮಲಯಾಳಿ ಬಾಂಧವರಿಗೆ ಓಣಂ ಶುಭಾಶಯಗಳನ್ನು ತಿಳಿಸಿ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು.