ಚೌಳಹಿರಿಯೂರಿನ ಕೊಪ್ಪಲು ಮರಳುಸಿದ್ದಪ್ಪ ಅವರ ದನದ ಕೊಟ್ಟಿಗೆಯ ಮುಂದೆ ಚಿರತೆ ಕರುಗಳ ಮೇಲೆ ದಾಳಿ ಮಾಡಿ ಸಾಯಿಸಿರುವುದು. 
ಚಿಕ್ಕಮಗಳೂರು

ಚಿರತೆ ದಾಳಿಗೆ ಜಾನುವಾರು ಬಲಿ

ಜಿ. ಗಜೇಂದ್ರ
ಚೌಳಹಿರಿಯೂರು: ಗ್ರಾಪಂ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಶನಿವಾರ ಮಧ್ಯರಾತ್ರಿ ಕೊಪ್ಪಲು ಮರುಳಸಿದ್ದಪ್ಪ ಅವರ ಕೊಟ್ಟಿಗೆಯ ಮುಂಭಾಗದಲ್ಲಿ ಕಟ್ಟಿದ್ದ ಎರಡು ಹೋರಿ ಕರುಗಳು ಸಾವನ್ನಪ್ಪಿವೆೆ.
ಚಿರತೆ ಗುರುವಾರ ಮಂಜುನಾಥಪುರದಲ್ಲಿ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದೆ. ಶುಕ್ರವಾರ ಕುರುಬರಹಳ್ಳಿ ತೋಟದಮನೆ ಹತ್ತಿರ ದಾಳಿ ನಡೆಸಿದ ಸಂದರ್ಭ ನಾಯಿ ತಪ್ಪಿಸಿಕೊಂಡ ನಂತರ ಗ್ರಾಮದೊಳಗೆ ಬಂದು ಕುಮಾರಪ್ಪ ಅವರ ಶಡ್‌ನಲ್ಲಿದ್ದ ಮೇಕೆ ಹೊತ್ತುಕೊಂಡು ಹೋಗಿದೆ. ನಂತರ ಮಲ್ಲೇಶಪ್ಪ ಅವರ ದನದ ಕೊಟ್ಟಿಗೆ ಬಳಿ ಎಮ್ಮೆಕರು ಕುತ್ತಿಗೆಗೆ ಬಾಯಿ ಹಾಕುವ ಸಂದರ್ಭ ಬೇರೆ ದನಗಳು ಗಾಬರಿಗೊಂಡಿದ್ದನ್ನು ಕಂಡು ಜನ ಬ್ಯಾಟರಿ ಹಾಕಿ ನೋಡಿದಾಗ ಬಿಟ್ಟು ಪರಾರಿಯಾಗಿದೆ.
ಶನಿವಾರ ಮಧ್ಯಾಹ್ನವೇ ಗ್ರಾಮದ ಸುತ್ತಮುತ್ತ ಸಂಚರಿಸುತ್ತಿದ್ದು ಜನ ಭಯ ಭೀತರಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಸ್ಪಂದಿಸಿ ಕುರುಬರಹಳ್ಳಿ ಕಟ್ಟೆಯ ಬಳಿ ಬೋನು ಇಟ್ಟಿದ್ದಾರೆ. ರಾತ್ರಿ ಚೌಳಹಿರಿಯೂರಿಗೆ ಬಂದು ಜಾನುವಾರುಗಳ ಮೇಲೆ ದಾಳಿ ಮಾಡಿದೆ. ಇದರಿಂದ ಜನರು ಹಗಲು ಮತ್ತು ರಾತ್ರಿ ತೋಟಗಳಿಗೆ ನೀರು ಹಾಯಿಸಲು, ಜಾನುವಾರು ಮೇಯಿಸಲು ಹೊರ ಹೋಗಲು ಭಯಭೀತರಾಗಿದ್ದಾರೆ.
ಭಾನುವಾರ ಬೆಳಗ್ಗೆ ಗಸ್ತು ಅರಣ್ಯ ಪಾಲಕರಾದ ಜೀವನ್ ಕುಮಾರ್, ಸಂತೋಷ್ ಮತ್ತು ವಾಚರ್ ಮಂಜಾನಾಯ್ಕ ಸ್ಥಳ ಪರಿಶೀಲಿಸಿ ಮತ್ತೊಂದು ಬೋನ್ ಇಡಲಾಗಿದೆ.