ಕೊಪ್ಪದಲ್ಲಿ ಆಯೋಜಿಸಿದ್ದ ಸಮಾಜ ನಾರಾಯಣ ಆರಾಧನೆ ಕಾರ್ಯಕ್ರಮದಲ್ಲಿ ಹರಿಹರಪುರ ಶ್ರೀಗಳು ಆಶೀರ್ವಚನ ನೀಡಿದರು.
ಕೊಪ್ಪ: ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯ, ಜಗಳ, ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಬೇರೆ ಎಂದು ಪರಿಗಣಿಸುವುದು ಹಾಗೂ ಜಾತಿ ವೈಷಮ್ಯಗಳು ಹಿಂದೂ ಧರ್ಮಕ್ಕೆ ಕುತ್ತು ತರುತ್ತದೆ ಎಂದು ಹರಿಹರಪುರದ ಶ್ರೀಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಪಟ್ಟಣದ ಗಂಧರ್ವ ಲೇಔಟ್‌ನ ನಾಗರತ್ನ ಮೋತಿಲಾಲ್ ತೇಲ್ಕರ್ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಸಮಾಜ ನಾರಾಯಣ ಆರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಣಗಳಲ್ಲಿ ಜಾತಿ ವ್ಯವಸ್ಥೆ ಇಲ್ಲ. ನಾವು ಸಮುದಾಯದ ಹೆಸರಿನಲ್ಲಿ ತಾರತಮ್ಯಮಾಡಬಾರದು. ಮಾನವರು ಒಂದೇ ಎಂಬ ಅರ್ಥ ಸಾರುತ್ತದೆ. ನಾವು ಮತ, ಸಂಪ್ರದಾಯ, ಸಿದ್ದಾಂತ ಹಾಗೂ ಇತ್ಯಾದಿಗಳ ಹೆಸರಿಲ್ಲಿ ಬೇದ ಭಾವ ಮಾಡುತ್ತಿರುವುದು ಸರಿಯಲ್ಲ ಎಂದರು.
ಸಮಾಜ ಎಂದರೇ ಸಹ ಮಾನವರು. ಭಾರತೀಯ ಸಂಸ್ಕೃತಿಯೂ ಸಮಾಜದ ಮೇಲೆ ನಿಂತಿದೆ. ನಾವೆಲ್ಲ ಒಂದೇ ಎಂಬ ಭಾವ ಇರಬೇಕು ಎಂದ ಅವರು, ಪ್ರಪಂಚದಲ್ಲಿ ಒಬ್ಬರು ಕೃಷಿ ಚಟುವಟಿಕೆ ನಡೆಸಿದರೆ, ಕೆಲವರು ಉದ್ಯಮ ಮಾಡುತ್ತಾರೆ ಇಂತಹ ವ್ಯಾವಹಾರಿಕ ಬೇಧವನ್ನು ಅಳಿಸಲು ಸಾಧ್ಯವಿಲ್ಲ. ಸಮಾಜ ನಾರಾಯಣ ಆರಾಧನೆಯಿಂದ ಜಾತಿ ವ್ಯವಸ್ಥೆ ದೂರ ಸರಿಯಬೇಕು. ಎಲ್ಲರೂ ಒಂದೇ ಎಂಬ ಭಾವ ಮೂಡಬೇಕು ಎಂಬ ಉದ್ದೇಶವಾಗಿದೆ. ಮಾನವರನ್ನು ಪವಿತ್ರ ದೃಷ್ಠಿಯಿಂದ ನೋಡಬೇಕು ಇದರಿಂದ ಮಾನವ ಸಂಬಂಧಗಳು ಗಟ್ಟಿಯಾಗಬೇಕು ಎಲ್ಲರಲ್ಲೂ ಸಹೋದರ ಸಂಬಂಧ ಮೂಡಬೇಕು ಎಂದು ಹೇಳಿದರು.
ನಮ್ಮ ದೇಶದ ಮೇಲೆ ಬಾಹ್ಯ ಹಾಗೂ ಅಂತರಿಕ ದಾಳಿಗಳು ನಡೆಯುತ್ತಿದೆ. ಮತಾಂತರ ಮತ್ತು ಜಿಹಾದ್ ಬಾಹ್ಯ ದಾಳಿಯಾದರೆ, ದೇಶದ ಒಳಗೆ ಒಲೈಕೆ, ವೋಟ್ ಬ್ಯಾಂಕ್ ಹೆಸರಿನಲ್ಲಿ ಅಂತರಿಕ ದಾಳಿಗಳು ರಾಜಕೀಯ ನಾಯಕರಿಂದ ನಡೆಯುತ್ತಿದೆ ಎಂದು ತಿಳಿಸಿದರು.