ಶೃಂಗೇರಿ: ನಗರ ಪ್ರದೇಶದಲ್ಲಿ ಕುಳಿತು ಐಷರಾಮಿ ಜೀವನ ನಡೆಸುವ ಪರಿಸರವಾದಿಗಳು ತಯಾರಿಸುವ ವರದಿಗಳಿಂದ ಮಲೆನಾಡಿನ ಮಣ್ಣಿನ ಸಂಸ್ಕೃತಿ ಹಾಗೂ ಕೃಷಿಯನ್ನು ಪ್ರೀತಿಸುವ ರೈತರು ಬಲಿಯಾಗುತ್ತಿದ್ದಾರೆ ಎಂದು ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಗಡೆ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 2012ರ ಮಾಧವ ಗಾಡ್ಗೀಳ್ ವರದಿಯನ್ನು ತಿರಸ್ಕೃತ ಮಾಡಲು ಕೇಂದ್ರದ ಎನ್‌ಡಿಎ ಸರ್ಕಾರ 2014ರಲ್ಲಿ ಕಸ್ತೂರಿ ರಂಗನ್ ವರದಿ ರೂಪಿಸಿದೆ. ಈ ವರದಿಗೆ ನಿರ್ದಿಷ್ಟ ರೂಪುರೇಷೆಯಿಲ್ಲ. ಈ ವರದಿ ಜಾರಿಯಾದರೆ ಜಿಲ್ಲೆಯ 127 ಗ್ರಾಮಗಳು ವ್ಯಾಪ್ತಿಗೆ ಸೇರಿದೆ. ಆದರಿಂದ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಇದು ರೈತಾಪಿ ವರ್ಗದವರನ್ನು ನಾಶ ಮಾಡುವ ಯೋಜನೆ. ಈ ಹಿಂದೆ ಆರು ಬಾರಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯ ಕರಡು ಅಧಿಸೂಚನೆ ಹೊರಡಿಸಿದಾಗ ಶಿವಮೊಗ್ಗ, ಕೊಡುಗು, ಉತ್ತರ ಕನ್ನಡ ಮತ್ತು ಇತರೆ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಅಕ್ಷೇಪಣೆ ಸಲ್ಲಿಸಲಾಗಿದೆ. ಈಗ ಮತ್ತೆ ಅಧಿಸೂಚನೆ ಹೊರಡಿಸಿ ಕೇಂದ್ರ ಸರ್ಕಾರ ಜನರ ಕಣ್ಣಿಗೆ ಮಣ್ಣು ಎರಚುವ ತಂತ್ರ ರೂಪಿಸಿದೆ. ಈ ಹಿಂದೆ ಅಧಿಸೂಚನೆ ಹೊರಡಿಸಿದಾಗ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆ ಮಾಡಬಾರದು ಎಂದು ನಿರ್ಣಯ ಕೈಗೊಂಡು ರಾಜ್ಯ ಸರ್ಕಾರ ತಿರಸ್ಕರಿಸಿತ್ತು. ಈಗ ಮತ್ತೆ ರಾಜ್ಯ ಸರ್ಕಾರ ಈ ಅಧಿಸೂಚನೆ ತಿರಸ್ಕರಿಸಬೇಕು ಎಂದರು.
ಕೇಂದ್ರ ಸರ್ಕಾರ ಒತ್ತುವರಿ ಜಾಗವನ್ನು ಸಕ್ರಮಗೊಳಿಸಲು ಅರ್ಜಿ ಹಾಕಲು ನಿರಂತರವಾಗಿ ಜನರಿಗೆ ಹೇಳುತ್ತಿದೆ. ರಾಶಿ ರಾಶಿ ಅರ್ಜಿಗಳು ಕಚೇರಿಯಲ್ಲಿ ಬಿದ್ದಿವೆ. ಈ ಯೋಜನೆ ಜಾರಿಗೆ ಬಂದರೆ ವಸತಿ ನಿರ್ಮಾಣ ಮಾಡಲು ಬಿಡುವುದಿಲ್ಲ. ಸಾವಯವ ಕೃಷಿಗೆ ಉತ್ತೇಜನ ನೀಡಬೇಕು. ತೋಟಗಾರಿಕಾ ಬೆಳೆಗಳಿಗೆ ಕಳೆನಾಶಕ, ಕೀಟನಾಶಕ, ರಾಸಯನಿಕ ಗೊಬ್ಬರ ಬಳಸಬಾರದು ಎಂಬ ನಿಯಮಗಳು ಈ ವರದಿಯಲ್ಲಿದೆ. ಒಂದು ವೇಳೆ ವರದಿ ಜಾರಿಗೆ ಬಂದರೆ ಬೆಳೆ ನಾಶವಾಗುವುದು ಖಂಡಿತ. ಈ ಕುರಿತು ನಾವೆಲ್ಲ ಗಂಭೀರ ಚಿಂತನೆ ಮಾಡಬೇಕು. ಕರುಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ಕಾರ್ಯಕ್ಕೆ ಎಲ್ಲರೂ ಒಗ್ಗೂಡಿ ಕಾರ್ಯ ಪ್ರವೃತ್ತವಾಗಬೇಕು ಎಂದರು.
ಕರ್ನಾಟಕ ಜನಶಕ್ತಿಮುಖ್ಯಸ್ಥ ಹಾಗಲಗಂಚಿ ವೆಂಕಟೇಶ್, ಪರಿಸರ ಜಾಗೃತಿ ವೇದಿಕೆ ಪದಾಧಿಕಾರಿ ಗಡಿಕಲ್ ಸುರೇಶ್ ಇದ್ದರು.