ಚಿಕ್ಕಮಗಳೂರು ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಅಂಗಡಿ ಮುಂಗಟ್ಟುಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆ ಬಳಸದಿರುವ ವಿರುದ್ಧ ಜು.೨೫ ರಂದು ನಾಮಫಲಕ ತೆರವು ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಚಿಕ್ಕಮಗಳೂರು: ನಗರದ ಅಂಗಡಿ ಮುಂಗಟ್ಟುಗಳಲ್ಲಿ ಶೇ.೬೦ರಷ್ಟು ಕನ್ನಡ ಭಾಷೆ ಬಳಸದಿರುವ ವಿರುದ್ಧ ಜು.೨೫ ರಂದು ನಾಮಫಲಕ ತೆರವು ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಿದೆ ಎಂ ದು ಕರವೇ (ಶಿವರಾಮೇಗೌಡ) ಬಣ ಮುಖಂಡರು ನಗರಸಭೆ ಪೌರಾಯುಕ್ತ ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಅಗ್ನಿ ಸುಮಂತ್ ಮಾತನಾಡಿ, ಕಳೆದ ಹಲವು ದಿನಗಳ ಹಿಂದೆ ಅಂಗಡಿ ಫಲಕದಲ್ಲಿ ಶೇ.೬೦ರಷ್ಟು ಕನ್ನಡ ಬಳಸಬೇಕೆಂದು ಗಡುವು ನೀಡಲಾಗಿತ್ತು. ಇದುವರೆಗೂ ಅಂಗಡಿ ಮಾಲೀಕರು ಸರ್ಕಾರದ ಆದೇಶ ಪಾಲಿಸದಿರುವ ಹಿನ್ನೆಲೆಯಲ್ಲಿ ನಾಮಫಲಕ ತೆರವು ಕಾರ್ಯ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ನಗರದ ಎಲ್ಲಾ ಅಂಗಡಿ, ವಾಣಿಜ್ಯ ಮಳಿಗೆ, ಸಂಸ್ಥೆಗಳು ಹಾಗು ವ್ಯಾಪಾರ ಕೇಂದ್ರಗಳ ನಾಮಫಲಕ ದಲ್ಲಿ ಶೇ.೬೦ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿರಬೇಕು. ನಿಯಮ ಉಲ್ಲಂಘಿಸಿರುವ ಅಂಗಡಿ, ವಾಣಿಜ್ಯ ಮ ಳಿಗೆ ಅಥವಾ ಸಂಸ್ಥೆಗಳ ನಾಮಫಲಕಗಳನ್ನು ತಿದ್ದುಪಡಿಸ ಮಾಡುವುದಕ್ಕೆ ಜಿಲ್ಲಾ ಕರವೇ ಅನೇಕ ಬಾರಿ ಮನವಿ ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂದರು.
ಆ ನಿಟ್ಟಿನಲ್ಲಿ ಅಂಗಡಿ ಮಾಲೀಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಾಮಫಲಕದಲ್ಲಿ ಶೇ.೬೦ ರಷ್ಟು ಬಳಕೆಗೆ ಕ್ರಮ ಕೈಗೊಳ್ಳದ ಕಾರಣ ಜು.೨೫ ರಂದು ಹನುಮಂತಪ್ಪ ವೃತ್ತದಿಂದ ಸರ್ಕಾರದ ನಿಯಮಾನುಸಾರ ತಿದ್ದುಪಡಿ ಮಾಡದ ಅಂಗಡಿಗಳ ನಾಮಫಲಕಗಳನ್ನು ತೆರವಿಗೆ ಮುಂದಾಗಿದ್ದು ಕನ್ನಡಾಭಿಮಾನಿಗಳು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ ನಾಡಿಗ್, ಉಪಾಧ್ಯಕ್ಷ ಶಶಿಕುಮಾರ್, ತಾಲ್ಲೂಕು ಅಧ್ಯಕ್ಷ ತೇಜಸ್‌ನಾಯ್ಕ್, ಆಟೋ ಘಟಕದ ಅಧ್ಯಕ್ಷ ಜೋಶ್ವ, ಮುಖಂಡರಾದ ವಸಂತ್, ಲಿಖಿನ್, ದಿವಾಕರ್ ಮುಂತಾದವರು ಉಪಸ್ಥಿತರಿದ್ದರು.