ಶೃಂಗೇರಿ ತಾಲೂಕು ಮೆಣಸೆ ಪಿಎಂಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ಪ್ರಾರಂಭೋತ್ಸವಕ್ಕೆ ಶಾಸಕ ಟಿ.ಡಿ.ರಾಜೇಗೌಡ ಚಾಲನೆ ನೀಡಿದರು. 
ಚಿಕ್ಕಮಗಳೂರು

ಸರ್ಕಾರಿ ಶಾಲೆ ಮಕ್ಕಳನ್ನು ಕರೆತರಲು ಬಸ್‌ವ್ಯವಸ್ಥೆ

ಶೃಂಗೇರಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತ್ತಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮೆಣಸೆ ಪಿಎಂಶ್ರೀ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ನೂತನ ಶಾಲಾ ಕೊಠಡಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಶಾಲೆಗೆ ಬಸ್ ಸೇವೆ ಒದಗಿಸಲಾಗಿದ್ದು, ಶಿಕ್ಷಕರ ಸಂಖ್ಯೆಯೂ ಕಡಿಮೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅಗತ್ಯವಿದ್ದಲ್ಲಿ ಅತಿಥಿ ಶಿಕ್ಷಕರ ಸೇವೆ ಪಡೆಯಲಾಗುತ್ತದೆ ಎಂದರು.
ವಿದ್ಯಾನಗರ ಸರ್ಕಾರಿ ಶಾಲೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗೆ ಇಂದು ಚಾಲನೆ ನೀಡಲಾಗಿದ್ದು, ನೂತನ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಂತದಿಂದ ದ್ವಿತೀಯ ಪಿಯುಸಿವರೆಗೂ ಒಂದೇ ಸೂರಿನಡಿ ಶಿಕ್ಷಣ ನೀಡಲಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳ ಸಂಖ್ಯೆ ತೀವ್ರ ಕುಸಿಯುತ್ತಿದ್ದು, ಕಡಿಮೆ ಸಂಖ್ಯೆಯಲ್ಲಿರುವ ಗ್ರಾಮೀಣ ಪ್ರದೇಶದ ಮಕ್ಕಳನ್ನು ಕೆಪಿಎಸ್ ಶಾಲೆಗೆ ತರಲು ವಾಹನ ವ್ಯವಸ್ಥೆ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
ಶಾಲಾ ಮಕ್ಕಳಿಗೆ ಹೂವು ನೀಡಿ, ಸಿಹಿ ಹಂಚಿ ಶಾಸಕರು ಮಕ್ಕಳನ್ನು ಸ್ವಾಗತಿಸಿದರು. ಶಾಲೆಯನ್ನು ತಳಿರು ತೋರಣದಿಂದ ಅಲಂಕರಿಸಲಾಗಿತ್ತು. ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಕಾಳ್ಯ, ಮುಖಂಡರಾದ ಕೆ.ಎಂ.ರಮೇಶ್ ಭಟ್, ಎಂ.ಎನ್.ಚಂದ್ರಶೇಖರ್, ತ್ರಿಮೂರ್ತಿ, ಕೆ.ಎಸ್.ರಮೇಶ್, ಸಂಧ್ಯಾ ಮರಿಯಪ್ಪನಾಯ್ಕ, ಎಸ್.ತಿಮ್ಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷ್ಮೀ, ದತ್ತಾತ್ರೇಯ ವಿ. ಯಾಜಿ, ಸಿದ್ದರಾಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಆಶಾಲತಾ, ಮುಖ್ಯ ಶಿಕ್ಷಕಿ ಜಯಂತಿ ಇತರರಿದ್ದರು.