ಅಜ್ಜಂಪುರ ತಾಲೂಕು ಸೊಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಜಾನಪದರ ಶ್ರಾವಣ ಸಂಗೀತ ಸಂಭ್ರಮೋತ್ಸವವನ್ನು ಸಾಹಿತಿ ಡಾ. ಎಚ್.ಎಸ್.ಮರುಳಸಿದ್ದಯ್ಯ ಪಟೇಲ್ ಉದ್ಘಾಟಿಸಿದರು. ಜಿ.ಬಿ.ಸುರೇಶ್, ಸುನೀತಾ, ಎ.ಸಿ.ಚಂದ್ರಪ್ಪ, ಡಾ. ಮಾಳೇನಹಳ್ಳಿ ಬಸಪ್ಪ, ಇಮ್ರಾನ್ ಅಹ್ಮದ್ ಬೇಗ್ ಇತರರಿದ್ದರು. 
ಚಿಕ್ಕಮಗಳೂರು

ಜಾನಪದದಿಂದ ಸದೃಢ ಸಮಾಜ ನಿರ್ಮಾಣ (janapada)

ಜಿ. ಗಜೇಂದ್ರ
ತರೀಕೆರೆ: ಜಾನಪದ ಸಾಹಿತ್ಯ, ಸಂಸ್ಕೃತಿಯಿಂದ ಭಾರತೀಯ ಸಂಸ್ಕೃತಿ ಸದೃಢವಾಗಿದೆ. ಹಳೇ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವ ಮಾತಿನಂತೆ ಜಾನಪದ ಸಾಹಿತ್ಯ, ಸಂಗೀತ, ಸಂಸ್ಕೃತಿ, ಕಲೆ ಎಂದೆಂದಿಗೂ ಜೀವಂತವಾಗಿದ್ದು ಪ್ರಪಂಚದಾದ್ಯಂತ ಕಂಗೊಳಿಸಲಿದೆ ಎಂದು ಸಾಹಿತಿ ಡಾ. ಮರುಳಸಿದ್ದಯ್ಯ ಪಟೇಲ್ ಹೇಳಿದರು.
ಅಜ್ಜಂಪುರ ತಾಲೂಕು ಸೊಕ್ಕೆ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಆವರಣದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ  ಹಾಗೂ ತಾಲೂಕು ಘಟಕದ ಸಹಯೋಗದಲ್ಲಿ ಏರ್ಪಡಿಸಿದ್ದ ಜನಪದರ ಶ್ರಾವಣ ಸಂಗೀತ ಸಂಭ್ರಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. 
ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ ಮಾತನಾಡಿ, ಜಾನಪದ ಸಂಸ್ಕೃತಿ ಜೀವಂತವಾಗಿ ಉಳಿಯಲು ಶಾಲಾ ಕಾಲೇಜಿನ ಪಠ್ಯಕ್ರಮಗಳಲ್ಲಿ ಜಾನಪದ ವಿಷಯ ಅಳವಡಿಸಿ ಮಕ್ಕಳಿಗೆ ಬೋಧಿಸಬೇಕು. ದೇಶದ ಪ್ರಗತಿ ಆ ದೇಶದ ಸಂಸ್ಕೃತಿ ಮೇಲೆ ನಿಂತಿದೆ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಜಾನಪದ ಕಲಾವಿದರಿಗೆ ಪ್ರತಿಭೆ ಅನಾವರಣಗೊಳಿಸಲು ಕರ್ನಾಟಕ ಜಾನಪದ ಪರಿಷತ್ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಪಂ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ಅತ್ಯುತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು. 
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸುನೀತಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನಪದ ಕಲೆ ಇಂದಿಗೂ ಜೀವಂತವಾಗಿದೆ. ಹಿರಿಯ ಕಲಾವಿದರು ಜಾನಪದ ಸಾಹಿತ್ಯ, ಸಂಗೀತ, ಕಲೆ ಮುಂದುವರಿಸಲು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.
ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಶಿವರಾಜ್ ಮಾತನಾಡಿ, ಮನುಷ್ಯರನ್ನು ಸುಸಂಸ್ಕೃತಗೊಳಿಸುವಲ್ಲಿ ಜಾನಪದದ ಪಾತ್ರ ಮಹತ್ವದ್ದಾಗಿದೆ. ಧಾರ್ಮಿಕ ಸಹಿಷ್ಣುತೆ, ಸಹಕಾರ, ಸಹಬಾಳ್ವೆ, ಸಂಪ್ರದಾಯ, ಆಚಾರ, ವಿಚಾರ, ಆಹಾರ ಪದ್ಧತಿ ಜಾನಪದ ಕಲಿಸಿಕೊಡಲಿದೆ ಎಂದರು.
ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಸಂಚಾಲಕಿ ಎಸ್.ಗಾಯತ್ರಮ್ಮ, ಕಲಾವಿದರಾದ ಡಾ. ಮಾಳೇನಹಳ್ಳಿ ಬಸಪ್ಪ, ಪ್ರಮುಖರಾದ ಚಿಕ್ಕನಲ್ಲೂರು ಜಯಣ್ಣ, ಗೊಂಡೇದಹಳ್ಳಿ ತಿಪ್ಪೇಶ್, ಚಿಕ್ಕನಲ್ಲೂರು ತಿಪ್ಪೇಶ್, ಶಂಕರಪ್ಪ, ಜ್ಯೋತಿ, ರಾಜಪ್ಪ, ನವೀನ್, ಮೋಹನ್ ಮತ್ತಿತರರಿದ್ದರು.