ಮೂಡಿಗೆರೆಯ ಸುಂಡೆಕೆರೆ ನದಿ ದಿಕ್ಕನ್ನು ಬದಲಿಸಿದ್ದನ್ನು ಕಂದಾಯ ಇಲಾಖೆ ಅಧಿಕಾರಿಗಳು ಸರಿಪಡಿಸುತ್ತಿರುವುದು.
ಮೂಡಿಗೆರೆ: ಸುಂಡೇಕೆರೆ ನದಿ ದಿಕ್ಕನ್ನು ಸ್ಥಳೀಯ ಕಾಫಿ ತೋಟದ ಮಾಲೀಕರೊಬ್ಬರು ಜೆಸಿಬಿ ಯಂತ್ರದ ಮೂಲಕ ಬದಲಿಸಲು ಮುಂದಾಗಿದ್ದಾರೆ. ಇದಕ್ಕೆ ಬ್ರೇಕ್ ಹಾಕಿರುವ ಕಂದಾಯ ಇಲಾಖೆ ಅಧಿಕಾರಿಗಳು ಮತ್ತೆ ಯಥಾ ಸ್ಥಿತಿಯಲ್ಲಿ ನದಿ ಹರಿಯುವ ವ್ಯವಸ್ಥೆ ಮಾಡಿದ್ದಾರೆ.
ಸುಂಡೆಕೆರೆ ನದಿಯ ಪಕ್ಕದಲ್ಲಿರುವ ಕಾಫಿ ತೋಟದ ಮಾಲೀಕ, ಮಳೆಗಾಲದಲ್ಲಿ ನದಿ ರಭಸವಾಗಿ ಹರಿಯುವಾಗ ತನ್ನ ತೋಟ ಕೊರೆಯುತ್ತದೆ ಎಂದು ಹರಿಯುವ ನದಿಯ ಇನ್ನೊಂದು ಭಾಗದಲ್ಲಿ ಹೊಸದಾಗಿ ಕಾಲುವೆ ನಿರ್ಮಿಸಿ ನದಿಯನ್ನು ಅತ್ತ ತಿರುಗಿಸಿ ಹಿಂದಿನಿಂದಲೂ ನದಿ ಹರಿಯುತ್ತಿರುವ ಜಾಗವನ್ನು ಮಣ್ಣು ಹಾಕಿ ಮುಚ್ಚಿ ತನ್ನ ತೋಟಕ್ಕಿಂತ ದೂರದಲ್ಲಿ ಹೊಸದಾಗಿ ಕಾಲುವೆ ನಿರ್ಮಿಸಿ ನದಿ ಹರಿಯುವ ವ್ಯವಸ್ಥೆ ಮಾಡಿದ್ದರು.
ಹರಿಯುತ್ತಿರುವ ನದಿಯನ್ನು ಮುಚ್ಚಿ ಇನ್ನೊಂದು ಕಡೆ ಹರಿಯುವ ವ್ಯವಸ್ಥೆ ಮಾಡಿರುವ ಬಗ್ಗೆ ಪಕ್ಕದ ತೋಟದ ಮಾಲೀಕ ತಹಸಿಲ್ದಾರ್ ಎಸ್.ಅಶ್ವಿನಿಗೆ ದೂರು ನೀಡಿದ್ದರು. ಈ ಬಗ್ಗೆ ಪರಿಶೀಲಿಸಿರುವ ತಹಸಿಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಕೂಡಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಂತೆ ಸ್ಥಳಕ್ಕೆ ತೆರಳಿರುವ ಅಧಿಕಾರಿಗಳು ಮುಚ್ಚಿದ್ದ ನದಿಯನ್ನು ತೆರೆದು ಸರಿಪಡಿಸಿದ್ದಾರೆ. ಇದುವರೆಗೂ ಹರಿಯುತ್ತಿದ್ದ ಮೂಲ ದಿಕ್ಕನ್ನು ಮತ್ತೆ ಮರು ಸ್ಥಾಪಿಸಿದ್ದಾರೆ. ನದಿ ದಿಕ್ಕನ್ನು ಬದಲಿಸಲು ನಿರ್ಮಿಸಿದ ಹೊಸ ಕಾಲುವೆಯನ್ನು ಅಧಿಕಾರಿಗಳ ತಂಡ ಮುಚ್ಚಿಸಿದೆ. ಇದರಿಂದ ಮತ್ತೆ ನದಿ ಯಥಾಸ್ಥಿತಿಯಲ್ಲಿ ಹರಿಯುತ್ತಿದೆ.