ಅಂತಾರಾಷ್ಟ್ರೀಯ ಯೋಗಾ ದಿನಾಚರಣೆ ಅಂಗವಾಗಿ ಕಡೂರಿನಲ್ಲಿ ಶ್ರೀ ರಾಘವೇಂದ್ರ ಯೋಗ ಅಸೋಸಿಯೇಷನ್‌ಯಿಂದ ಸಾಮೂಹಿಕ ಯೋಗಾಭ್ಯಾಸ ನಡೆಯಿತು.  
ಚಿಕ್ಕಮಗಳೂರು

ಯೋಗದಿಂದ ರೋಗನಿರೋಧಕ ಶಕ್ತಿ ವೃದ್ಧಿ

ಜಿ. ಗಜೇಂದ್ರ
 ಕಡೂರು: ಯೋಗವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಕಾರಾತ್ಮಕ ಆಲೋಚನೆಗಳನ್ನು ನಿವಾರಿಸುತ್ತದೆ ಎಂದು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಹೇಳಿದರು.
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ಆಯುಷ್ ಇಲಾಖೆ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ, ವಿಜಯವಾಣಿ ದಿನಪತ್ರಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ನಡೆದ ಸಾಮೂಹಿಕ ಯೋಗಾಭ್ಯಾಸದಲ್ಲಿ ಅವರು ಮಾತನಾಡಿದರು.
 ಸದೃಢ ದೇಹ ಕಾಪಾಡಿಕೊಳ್ಳಲು ಪ್ರತಿನಿತ್ಯ ಯೋಗಾಭ್ಯಾಸ ಅವಶ್ಯಕ. ಯೋಗವು ಯಾವುದೇ ವಯಸ್ಸಿಗೆ ಮಿತಿ ಇರುವುದಿಲ್ಲ. ಆರೋಗ್ಯಕರ ಮತ್ತು ಶಿಸ್ತುಬದ್ಧ ಜೀವನಶೈಲಿ ರೂಪಿಸಲು ಸಾಧ್ಯವಾಗಲಿದೆ ಎಂದರು.
ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಯೋಗದ ನಿಯಮಗಳನ್ನು ಪಾಲಿಸುವಲ್ಲಿ ಭಾರತ ಇತರ ರಾಷ್ಟ್ರಗಳಿಗಿಂತ ಮುಂಚೂಣಿಯಲ್ಲಿದೆ. ಕಲುಷಿತ ಆಹಾರ ಸೇವನೆಯಿಂದ ಅನೇಕ ರೋಗಗಳಿಗೆ ತುತ್ತಾಗಿರುವುದು ದುರಂತ. ಇದಕ್ಕೆ ಪರಿಹಾರವಾಗಿ ಯೋಗಾಭ್ಯಾಸಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ನಮ್ಮ ದೇಹದ ನಿಯಂತ್ರಣ, ಅಂಗಾಂಗಳ ಪರಿಪೂರ್ಣ ಮತ್ತು ಕ್ರಮಬದ್ಧವಾದ ಕಾರ್ಯಚಟುವಟಿಕೆ, ಮನಸ್ಸಿನ ಸಮತೋಲನ, ಶಿಸ್ತು ಬದ್ಧವಾದ ಜೀವನ ನಡೆಸಲು ಯೋಗಾಭ್ಯಾಸಗಳು ಹೆಚ್ಚು ಪರಿಣಾಮಕಾರಿಯಾಗಲಿವೆ ಎಂದರು.
ವಿವಿಧ ಶಾಲಾ-ಕಾಲೇಜಿನ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ವಿದ್ಯಾರ್ಥಿಗಳು, ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳು ಸೇರಿದಂತೆ ಪಟ್ಟಣದ ನಾಗರಿಕರು ಸಾಮೂಹಿಕ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಇದೇ ವೇಳೆ ಯೋಗಪಟುಗಳಿಂದ ಆಕರ್ಷಕ ಪ್ರದರ್ಶನ ನಡೆಯಿತು. 
ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಯೋಗಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಪರಿಗಣಿಸಿ ಯೋಗಪಟುಗಳನ್ನು ಗೌರವಿಸಲಾಯಿತು. ಯೋಗ ಶಿಕ್ಷಕ ದಂಪತಿ ಬಿ.ಎಂ.ಗಿರೀಶ್ ಮತ್ತು ವಿಜಯಾ ಗಿರೀಶ್ ಯೋಗದ ಮಹತ್ವದ ಕುರಿತು ಅರಿವು ಮೂಡಿಸಿ ಯೋಗಾಭ್ಯಾಸದ ನಿರ್ವಹಣೆ ನಡೆಸಿಕೊಟ್ಟರು.  
ಬಿಇಒ ಎಂ.ಎಚ್.ತಿಮ್ಮಯ್ಯ, ಬಿಸಿಎಂ ಅಧಿಕಾರಿ ದೇವರಾಜ್, ಸಮಾಜ ಕಲ್ಯಾಣಾಧಿಕಾರಿ ನಟರಾಜ್, ಆಯುಷ್ ವೈದ್ಯಾಧಿಕಾರಿ ಡಾ. ದೊಡ್ಡಗುಣಿ, ನರೇಂದ್ರನಾಥ್, ಶೇಖರಪ್ಪ, ಕ್ರೀಡಾಧಿಕಾರಿ ಮುರುಳಿ, ತೀರ್ಥಕುಮಾರ್ ಮತ್ತಿತರರಿದ್ದರು.