ತರೀಕೆರೆ ತಾಲೂಕು ಲಿಂಗದಹಳ್ಳಿಯ ಹೊಸಕೆರೆಗೆ ಭದ್ರಾ ಉಪ ಕಣಿವೆಯಿಂದ ಮೊದಲನೇ ಹಂತದಲ್ಲಿ ನೀರು ಹರಿದುಬಂದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರೈತರ ಜತೆಗೂಡಿ ಸಂಭ್ರಮಿಸಿದರು. ಎಲ್.ಕೆ.ಅನಿಲ್‌ಕುಮಾರ್, ಎಲ್.ಪಿ.ಲೋಕೇಶ್, ಜಯಣ್ಣ, ಶ್ರೀನಿವಾಸ್, ನಂಜುಂಡಸ್ವಾಮಿ ಇತರರಿದ್ದರು.
ತರೀಕೆರೆ: ಭದ್ರಾ ಉಪ ಕಣಿವೆಯಿಂದ ತಾಲೂಕಿನ ಲಿಂಗದಹಳ್ಳಿಯ ವಿವಿಧ ಕೆರೆಗಳಿಗೆ ಸೋಮವಾರ ಪ್ರಾಯೋಗಿಕವಾಗಿ ನೀರು ಹರಿಸಲಾಯಿತು.
ಮೊದಲನೇ ಹಂತದಲ್ಲಿ ಲಿಂಗದಹಳ್ಳಿಯ ಹೊಸಕೆರೆ, ಪಿಳ್ಳಯ್ಯನಕೆರೆ, ಮುಷ್ಟಿಕೆರೆಗೆ ಭದ್ರೆ ನೀರು ಹರಿದುಬಂದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರೈತರ ಜತೆಗೂಡಿ ಸಿಹಿ ಹಂಚಿ ಸಂಭ್ರಮಿಸಿದರು. ಪಿಎಸಿಎಸ್ ನಿರ್ದೇಶಕ ಎಲ್.ಕೆ.ಅನಿಲ್‌ಕುಮಾರ್ ಮಾತನಾಡಿ, ಭದ್ರಾ ಉಪ ಕಣಿವೆಯಿಂದ ತಾಲೂಕಿನ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆಯು ಮಾಜಿ ಶಾಸಕರಾದ ಸಿ.ಟಿ.ರವಿ, ಡಿ.ಎಸ್.ಸುರೇಶ್ ಹಾಗೂ ಬೆಳ್ಳಿ ಪ್ರಕಾಶ್ ಅವರ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದಷ್ಟೇ ಅಲ್ಲ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 2020-21ನೇ ಸಾಲಿನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿ ಕಾಮಗಾರಿ ಆರಂಭಕ್ಕೆ 406 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದರಿಂದ ಅನುಷ್ಠಾನಗೊಂಡಿದೆ ಎಂದರು.
ಕೆರೆಗಳಿಗೆ ನೀರು ಹರಿದುಬರುವುದರಿಂದ ಅಂತರ್ಜಲ ವೃದ್ಧಿಯಾಗಿ ರೈತರ ನೀರಾವರಿ ವ್ಯವಸ್ಥೆಗೆ ಅನುಕೂಲವಾಗಲಿದೆ. ರೈತರು ನೀರಿನ ಮಹತ್ವ ಅರಿತು ಬಳಸಬೇಕು. ಕೊಳವೆ ಬಾವಿ ಮೂಲಕ ಪೂರೈಸಿಕೊಳ್ಳುವ ನೀರು ಪೋಲಾಗದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ತಾಪಂ ಮಾಜಿ ಸದಸ್ಯ ಎಲ್.ಪಿ.ಲೋಕೇಶ್, ಪಿಎಸಿಎಸ್ ಮಾಜಿ ಅಧ್ಯಕ್ಷ ಜಯಣ್ಣ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀನಿವಾಸ್, ಪ್ರಮುಖರಾದ ನಂಜುಂಡಸ್ವಾಮಿ, ಗಿರೀಶ್, ಎಲ್.ಎನ್.ಸತೀಶ್, ಸಂತೋಷ್ ಮತ್ತಿತರರಿದ್ದರು.