ಕಡೂರಿನ ವಿ.ಯರದಕೆರೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ರಾಮೇನಹಳ್ಳಿ ತಾಂಡ್ಯದ 21 ಜನ ಲಾನುಭವಿಗಳಿಗೆ ಶಾಸಕ ಕೆ.ಎಸ್.ಆನಂದ್ ಹಕ್ಕುಪತ್ರಗಳನ್ನು ವಿತರಿಸಿದರು.
ಕಡೂರು: ನರೇಗಾದಡಿಯಲ್ಲಿ ಕೈಗೊಂಡಿರುವ ಹಿಂದಿನ ಬಹುತೇಕ ಕಾಮಗಾರಿಗಳಿಗೆ ಬಿಡುಗಡೆ ಯಾಗಬೇಕಾದ ಬಾಕಿ ಹಣವನ್ನು ನಿಗದಿತ ಅವಧಿಯೊಳಗೆ ಪಾವತಿಸಲು ಕ್ರಮಕೈಗೊಳ್ಳಲು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಪಂ ಸಿಇಒ ಎಚ್.ಎಸ್.ಕೀರ್ತನಾ ತಿಳಿಸಿದರು.
ವಿ.ಯರದಕರೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಯಡಿ ಅನುಷ್ಠಾನಗೊಂಡಿರುವ ಕಾಮಗಾರಿಗಳಿಗೆ ಇದುವರೆಗೂ ಬಿಲ್ ಪಾವತಿಯಾಗಿಲ್ಲ ಎಂಬ ಗ್ರಾಮಸ್ಥ ನವೀನ್ ದೂರಿಗೆ, ಪ್ರತಿಕ್ರಿಯಿಸಿ, ವಿ.ಯರದಕೆರೆ ಗ್ರಾಪಂ ಒಂದೇ ಸಮಸ್ಯೆಯಲ್ಲ. ಬಹುತೇಕ ಪಂಚಾಯಿತಿಗಳಲ್ಲಿ ಸಮಸ್ಯೆ ಇದೆ. ಆದರೆ ಅಗತ್ಯ ಕಡತವನ್ನು ನಿರ್ವಹಣೆ ಮಾಡುವಲ್ಲಿ ಪಿಡಿಒಗಳು ನಿರ್ಲಕ್ಷೃ ವಹಿಸಿರುವ ಬಗ್ಗೆ ಗಮನಿಸಲಾಗಿದೆ ಎಂದರು.
ಮೂರು ದಿನಗಳಿಂದ ತಾಲೂಕಿನಾದ್ಯಂತ ಭೇಟಿ ನೀಡಿದ ಪಂಚಾಯಿತಿಗಳಲ್ಲಿ 1700ಕ್ಕೂ ಹೆಚ್ಚು ನರೇಗಾದಡಿ ಇಂತಹ ಕಾಮಗಾರಿಗಳ ಬಿಲ್ ಸಮಸ್ಯೆ ಎದ್ದು ಕಾಣುತ್ತಿದೆ. 2021-22ರಲ್ಲಿ ಆರಂಭಿಸಿದ ಕಾಮಗಾರಿ ಆನಲೈನ್ ಸ್ಟೇಟಸ್‌ನಲ್ಲಿ ಇದುವರೆಗೆ ಕಾಮಗಾರಿ ಪ್ರಗತಿ ಎಂದು ತೋರಿಸುತ್ತಿದೆ. ಆದರೆ ಅಗತ್ಯ ಪರಿಶೀಲನೆಯಲ್ಲಿ ಕೆಲಸ ಮುಗಿದು ಬಹಳಷ್ಟು ದಿನಗಳಾಗಿರುತ್ತವೆ. ಪರಿಶೀಲನೆ ವೇಳೆ ಕೆಲವು ಪಿಡಿಒಗಳ ಲೋಪ ಕಂಡು ಬರುತ್ತಿದೆ. ಇವುಗಳನ್ನು ಸರಿಪಡಿಸಿ ಮೊದಲು ವೈಯಕ್ತಿಕ ಕಾಮಗಾರಿಗಳಿಗೆ ಬಿಲ್ ಪಾವತಿಸಿಕೊಡಲು ಕ್ರಮವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಂತರ ಹಂತ ಹಂತವಾಗಿ ಇತರೆ ಬಿಲ್‌ಗಳ ಪಾವತಿಗೆ ಒತ್ತುಕೊಡಲಾಗುತ್ತದೆ. ಜತೆಗೆ ಈಗಾಗಲೇ ನರೇಗಾ ಯೋಜನೆ ಬಳಿಕ ವಿಬಿ ಜಿರಾಮ್‌ಜಿ ಯೋಜನೆ ಅನುಷ್ಠಾನಕ್ಕೂ ಮೊದಲು ಹಿಂದಿನ ಕಾಮಗಾರಿಗಳ ಬಿಲ್‌ಗಳನ್ನು ಪಿಡಿಒಗಳು ಪೂರ್ಣಗೊಳಿಸಿಕೊಳ್ಳಬೇಕಿದೆ ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಎಂಟು ವರ್ಷವಾದರೂ ಪಾವತಿಯಾಗದ ಬಿಲ್
2018-19ನೇ ಸಾಲಿನ ಬರಗಾಲದ ಅವಧಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿದ್ದರೂ ಕೂಡ ಹಿಂದಿನ ಪಿಡಿಒ ಎಡವಟ್ಟಿನಿಂದ ಬಿಲ್ ಪಾವತಿಸದೆ ದಾಖಲೆಗಳನ್ನು ಮರೆಮಾಚಿ ಪಂಚಾಯಿತಿಗೆ ದಿನನಿತ್ಯ ಅಲೆದಾಡಿಸುತ್ತಿದ್ದಾರೆ ಕೂಡಲೇ ನೀರು ಪೂರೈಕೆ ಮಾಡಿದ ಹಣ ನೀಡಬೇಕು ಎಂದು ಗ್ರಾಮಸ್ಥ ಮಮತಾ ಒತ್ತಾಯಿಸಿದರು. ಗ್ರಾಪಂ ಸದಸ್ಯ ಹಂಪಾಪುರ ಮಹೇಶ್ ಮಾತನಾಡಿ, ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಪಂಚಾಯಿತಿಯ ವರ್ಗ-1ರಲ್ಲಿ ಇದ್ದ 1ಲಕ್ಷ ರೂ. ಹಣವನ್ನು ನೀರು ಪೂರೈಕೆ ಮಾಡಿದವರಿಗೆ ಒದಗಿಸಿಕೊಡಲಾಗಿದೆ. ಆದರೆ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಪೂರೈಕೆ ಬಗ್ಗೆ ಹಿಂದಿನ ಪಿಡಿಒ ನಿವೃತ್ತಿ ಹೊಂದಿದ್ದಾರೆ ಎಂದು ಉತ್ತರಿಸಿದಾಗ ಮತ್ತೋರ್ವ ಪಂಚಾಯಿತಿ ಸದಸ್ಯ ಶಿವಕುಮಾರ್ ಪ್ರತಿಕ್ರಿಯಿಸಿ ಮಾತನಾಡಿ, ಕಂದಾಯ ವಸೂಲಾತಿಯಲ್ಲಿಯೇ ಪಂಚಾಯಿತಿ ನಿರ್ವಹಣೆ ನಡೆಸಲಾಗುತ್ತಿದೆ. ಟ್ಯಾಂಕರ್ ನೀರು ಪೂರೈಕೆ ಹಣವನ್ನು ಪಾವತಿಗೆ ಪರಿಶೀಲಿಸಿ ಕ್ರಮವಹಿಸಲು ಪ್ರಯತ್ನ ಮಾಡಲಾಗುವುದು ಎಂದರು.