ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿ
- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಮಾಫಿಯಾದವರೊಂದಿಗೆ ಶಾಮೀಲು
- ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಸಿಎಂ
ಚಿಕ್ಕಮಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಿಯಲ್ ಎಸ್ಟೇಟ್ ಮಾಫಿಯಾದವರೊಂದಿಗೆ ಶಾಮೀಲಾಗಿ ಬಿಡದಿ ಟೌನ್‌ಶಿಪ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ರೈತರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ ಎಸ್.ಶೆಟ್ಟಿಆರೋಪಿಸಿರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಬ್ಬಾಳಿಕೆಯಿಂದ ಬಿಡದಿ ಟೌನ್ ಶಿಪ್ ಮಾಡಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆಗೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಗೆ ಆಹ್ವಾನ ನೀಡಿದರೆ ಅವರು ತಮ್ಮ ಬದಲು ಕೆಂಪು ಬಾವುಟ ಹಿಡಿದವರನ್ನು ಕಳುಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿಯಲ್ಲಿ ಟೌನ್‌ಶಿಪ್ ವಿರೋಧಿಸಿ ನಡೆಯುತ್ತಿರುವ ಹೋರಾಟದ ಸಮೀಪವೇ ಕೆಲವರು ಕೆಂಪು ಬಾವುಟ ಹಿಡಿದು ಯೋಜನೆ ಪರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ಕೆಲವರನ್ನು ಈ ರೀತಿ ಮುಂದೆ ಬಿಟ್ಟು ಹೋರಾಟ ಮಾಡಿಸುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಪ್ರತಿಷ್ಟೆಯಿಂದ ದಬ್ಬಾಳಿಕೆ ಮೂಲಕ ಯೋಜನೆ ಅನುಷ್ಠಾನ ಮಾಡಲು ಮುಂದಾಗಿದ್ದಾರೆ. ದಬ್ಬಾಳಿಕೆ ಮೂಲಕ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕುತ್ತೇವೆ ಎಂದುಕೊಂಡಿದ್ದರೆ ಅದು ಕನಸಿನ ಮಾತು. ಕಾಂಗ್ರೆಸ್ ನಾಯಕರ ನಡುವಿನ ಕಚ್ಚಾಟ ಮುಚ್ಚಿಹಾಕಿಕೊಳ್ಳುವ ಉದ್ದೇಶದಿಂದ ಇದೀಗ ಬಿಡದಿ ಸಮಸ್ಯೆ ಮುನ್ನಲೆಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಯೋಜನೆ ಅನುಷ್ಠಾನ ಮಾಡುವಾಗ ಭೂಮಿ ಕಳೆದುಕೊಳ್ಳುವ ರೈತರ ಬಳಿಗೇ ಹೋಗಿ ಸಭೆ ಮಾಡಬೇಕು. ಹಿಂದೆ ನೈಸ್ ಯೋಜನೆ ಜಾರಿ ಮಾಡುವಾಗ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರೈತರ ಬಳಿಯೇ ತೆರಳಿ ಸಭೆ ನಡೆಸಿದ್ದರು. ಆದರೆ ಇಂದಿನ ಮುಖ್ಯಮಂತ್ರಿ ದಬ್ಬಾಳಿಕೆ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಬಿಜೆಪಿ ಹಾಗೂ ಜೆಡಿಎಸ್ ನ ಹನ್ನೆರಡು ಮಂದಿ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಶಾಸಕರನ್ನು ಯಾವ ಯಾವ ಆಮಿಷಗಳನ್ನೊ ಒಡ್ಡಿ ಕೊಂಡುಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಿಮ್ಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತೇವೆ ಎನ್ನುವ ಆಮಿಷವನ್ನು ಒಡ್ಡಿರಬಹುದು. ಆದರೆ ಆಮಿಷಕ್ಕೆ ಒಳಗಾದ ಶಾಸಕರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಅಡ್ಡ ಮತದಾನ ಮಾಡುವುದಿದ್ದರೆ ಅಂತ ಶಾಸಕರು ಪಕ್ಷದ ವೇದಿಕೆಯಲ್ಲಿಯೇ ಅದನ್ನು ನೇರವಾಗಿ ಹೇಳಬಹುದು. ಒಂದು ವೇಳೆ ತಾವು ಗೆದ್ದ ಪಕ್ಷದ ಸಿದ್ಧಾಂತ ಅವರಿಗೆ ಒಪ್ಪಿಗೆ ಯಾಗದಿದ್ದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಬೇಕಿತ್ತು. ಅದನ್ನು ಬಿಟ್ಟು ಮಾತ್ರ ಪಕ್ಷಕ್ಕೆ ಮೋಸ ಮಾಡುವುದು ಅಕ್ಷ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡಿನ ಜನರಿಗೆ ಅಡಕೆಯೇ ಜೀವಾಳ. ಆದರೆ ಇಂದು ಅಡಕೆ ಸಂಪೂರ್ಣವಾಗಿ ನಾಶವಾಗುವ ಹಂತ ತಲುಪಿದೆ. ಅಡಕೆಗೆ ಬಂದಿರುವ ರೋಗಗಳ ಮೇಲೆ ಯಾವುದೇ ಸಂಶೋಧನೆ ನಡೆದಿಲ್ಲ. ಅಡಕೆ ಸಂಶೋಧನ ಕೇಂದ್ರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಅಡಕೆ ಸಂಶೋಧನೆಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹೆಸರಿನಲ್ಲಿ ದೊಡ್ಡ ಕಳ್ಳರ ಕೂಟವೇ ಇದ್ದಂತಿದೆ. ಈ ಅನುಷ್ಠಾನ ಸಮಿತಿಗಳಿಗೆ ಮಾಸಿಕ 60 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರ ತಮ್ಮ ಪಕ್ಷದ ಕಾರ್ಯಕರ್ತರ ಜೇಬು ತುಂಬಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ರಾಮ ಮಂದಿರ ಹಿಂದುಗಳ ಪವಿತ್ರ ಕ್ಷೇತ್ರ. ಈ ಮಂದಿರ ನಿರ್ಮಾಣವಾಗುವಾಗ ಇಡೀ ದೇಶದ ಜನ ಪಕ್ಷಾತೀತವಾಗಿ ದೇಣಿಗೆ ನೀಡಿದ್ದಾರೆ. ಇಂಥ ಕ್ಷೇತ್ರದ ಹುಂಡಿಗೆ ಕನ್ನ ಹಾಕಿರುವುದು ನಾಚಿಕೆಗೇಡಿನ ಸಂಗತಿ. ಯಾರೇ ಕಳ್ಳತನ ಮಾಡಿದ್ದರು ಅವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು.
ಸುಧಾಕರ ಶೆಟ್ಟಿ, ಜೆಡಿಎಸ್ ರಾಷ್ಟ್ರೀಯ ವಕ್ತಾರ