ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾದ ಭವ್ಯಾ ಮಂಜುನಾಥ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಎಂಎಲ್‌ಸಿಗಳಾದ ಸಿ.ಟಿ.ರವಿ, ಎಸ್.ಎಲ್.ಭೋಜೇಗೌಡ, ಪ್ರಮುಖರಾದ ಎಂ.ಆರ್.ದೇವರಾಜ ಶೆಟ್ಟಿ, ಕೆ.ಎಸ್.ಪುಷ್ಪರಾಜ್, ವರಸಿದ್ಧಿ ವೇಣುಗೋಪಾಲ್, ಮಧುಕುಮಾರ್ ರಾಜ್ ಅರಸ್ ಮತ್ತಿತರರು ಅಭಿನಂದಿಸಿದರು.
- ಶೀಲಾ ದಿನೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ
ಚಿಕ್ಕಮಗಳೂರು: ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಸದಸ್ಯೆ ಭವ್ಯಾ ಮಂಜುನಾಥ್ ಗುರುವಾಗ ನಡೆದ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷೆ ಶೀಲಾ ದಿನೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಿಗಧಿಯಾಗಿತ್ತು. ಭವ್ಯಾ ಮಂಜುನಾಥ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಕೆ ಮಾಡದಿದ್ದರಿಂದಾಗಿ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ನಟೇಶ್ ಅವರು ಅವಿರೋಧ ಆಯ್ಕೆ ಘೋಷಿಸಿದರು.
ನಗರಸಭೆಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಮೀಸಲಾತಿ ಬಂದಿದ್ದರಿAದಾಗಿ ಮೂವರು ಸದಸ್ಯೆಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಒಪ್ಪಂದ ಮಾಡಿಕೊಂಡಿದ್ದರು. ಅದರಂತೆ ಮೊದಲ ಹತ್ತು ತಿಂಗಳ ಅವಧಿಗೆ ಬಿಜೆಪಿಯ ಸುಜಾತ ಶಿವಕುಮಾರ್, ಬಳಿಕ ಜೆಡಿಎಸ್‌ನ ಶೀಲಾ ದಿನೇಶ್ ಹಾಗೂ ಕೊನೆಯ ಎಂಟು ತಿಂಗಳಿಗೆ ಇದೀಗ ಭವ್ಯಾ ಮಂಜುನಾಥ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ನಗರದ ೩೨ನೇ ವಾರ್ಡಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಭವ್ಯಾ ಮಂಜುನಾಥ್ ಅವರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ನಾಯಕರು ಭವ್ಯಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ತೀರ್ಮಾನಿಸಿ ಅದರಂತೆ ಅವರನ್ನೇ ಅಧ್ಯಕ್ಷರನ್ನಾಗಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ನಗರಮಂಡಲ ಅಧ್ಯಕ್ಷ ಕೆ.ಎಸ್.ಪುಷ್ವರಾಜ್, ಮುಖಂಡ ಕೋಟೆ ರಂಗನಾಥ್, ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿನಾಯಕ್, ಸದಸ್ಯರಾದ ರೂಪಕುಮಾರ್, ಕವಿತಾ ಶೇಖರ್, ಸುಜಾತ ಶಿವಕುಮಾರ್, ಶೀಲಾ ದಿನೇಶ್, ಮಧುಕುಮಾರ್ ರಾಜ್ ಅರಸ್, ಎ.ಸಿ.ಕುಮಾರ್, ಗೋಪಿ, ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತ ಬಿ.ಸಿ.ಬಸವರಾಜ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.