ಕೊಪ್ಪದ ಭಂಡಿಗಡಿಯ ಈಚಲಬೈಲು ಗ್ರಾಮದಲ್ಲಿ ಲೋಕಾಯುಕ್ತ ಅಧಿಕಾರಿಗಳು ಸರ್ವೇ ನಡೆಸಿದರು. ಲೋಕಯುಕ್ತಾ ಇಂಜಿನಿಯರ್ ಪಾಂಡುರಂಗ ಕುಲಕ್ಕರ್ಣಿ, ತಹಸೀಲ್ದಾರ್ ಲಿಖಿತ ಮೋಹನ್ ಇದ್ದರು. 
ಚಿಕ್ಕಮಗಳೂರು

ಕೊಪ್ಪದ ಭಂಡಿಗಡಿ ಗ್ರಾಮಕ್ಕೆ ಒತ್ತುವರಿ ಕಂಟಕ !

ಕೊಪ್ಪ: ಭಂಡಿಗ್ರಾಮದ ಸರ್ವೇ ನಂಬರ್ 314ರಲ್ಲಿ ಖಾಸಗಿ ಅರ್ಜಿ ಸಂಬಂಧ ಲೋಕಾಯುಕ್ತ ಅಧಿಕಾರಿಗಳು ಅರಣ್ಯ, ಕಂದಾಯ ಭೂ ಪ್ರದೇಶ ಒತ್ತುವರಿ ಕುರಿತು ಗುರುವಾರ ಹಾಗೂ ಶುಕ್ರವಾರ ಸರ್ವೇ ಕಾರ್ಯ ನಡೆಸಿದ್ದಾರೆ.
ಭಂಡಿಗ್ರಾಮದ ಸರ್ವೇ 314ರಲ್ಲಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಈಚಲುಬೈಲು ಗ್ರಾಮದ ವಾಸಿಯೊಬ್ಬರು ಈ ಹಿಂದೆ ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಎರಡು ದಿನ ಸರ್ವೇ ನಡೆಸಿದ್ದಾರೆ. ಈ ವೇಳೆ ಲೋಕಾ ಅಧಿಕಾರಿಗಳಿಗೆ ಸರ್ಕಾರದಿಂದ ಮಂಜೂರಾದ ಜಮೀನುಗಳಿಗಿಂತ ಹೆಚ್ಚಿನ ಪ್ರದೇಶ ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ವರದಿಯಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ.
ಭಂಡಿಗಡಿಯ ಸರ್ವೇ ನಂಬರ್ 314 ಪೋಡಿಯಾಗದ ಕಾರಣ ಈ ಪ್ರದೇಶ ಅರಣ್ಯ ಇಲಾಖೆ ಅಥವಾ ಕಂದಾಯ ಇಲಾಖೆಗೆ ಸೇರಿದ ಜಾಗ ಎಂಬುದರ ಬಗ್ಗೆ ತಕ್ಷಣಕ್ಕೆ ನಿರ್ಧಾರಕ್ಕೆ ಬರಲು ಕಂದಾಯ ಇಲಾಖೆ ಸಾಧ್ಯವಿಲ್ಲ ಎಂಬ ವರದಿ ಕಂದಾಯ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಕಂದಾಯ, ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿದ ನಂತರ ಈ ಬಗ್ಗೆ ಮಾಹಿತಿ ದೊರೆಯಲಿದೆ ಎಂದು ಲೋಕಾಯುಕ್ತಗೆ ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಲೋಕಾಯುಕ್ತ ಸರ್ವೇಯಿಂದ ಭಂಡಿಗಡಿ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ. ಸರ್ಕಾರ ಮಂಜೂರು ಮಾಡಿದ ಅಲ್ಪ ಜಮೀನಿನ ಜತೆ ಒತ್ತುವರಿ ಮಾಡಿಕೊಂಡು ಅಡಕೆ ತೋಟ, ಬಾಳೆ, ಕಾಳುಮೆಣೆಸು ಬೆಳೆದು ಜೀವನ ಕಟ್ಟಿಕೊಂಡಿದ್ದ ರೈತರಿಗೆ ನಿದ್ದೆ ಇಲ್ಲದಂತಾಗಿದೆ. ಇದರ ಜತೆಯಲ್ಲಿ ಕೃಷಿ ಕಾರ್ಮಿಕರಿಗೂ ಆತಂಕ ಎದುರಾಗಿದೆ.
ಗ್ರಾಮದ ಸರ್ವೇ ನಂ.314ರಲ್ಲಿ ಸುಮಾರು 202 ಎಕರೆ ಪ್ರದೇಶ ಪಹಣಿಯಲ್ಲಿ ಗೋಮಾಳ ಎಂದು ನಮೂದಾಗಿದೆ. ಇದನ್ನು ಡಿಸಿ ರೀಸರ್ವ್ ಎಂದು ಘೋಷಿಸಲಾಗಿದೆ ಎನ್ನಲಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಒತ್ತುವರಿ ನಡೆದಿರುವ ಸಾಧ್ಯತೆ ಇದೆ. ಇದು ಕಂದಾಯ ಮತ್ತು ಅರಣ್ಯ ಇಲಾಖೆ ತಿಕ್ಕಾಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಈ ನಡುವೆ ಲೋಕಾಯುಕ್ತ ವರದಿ ಭಂಡಿಗಡಿಯ ವಾಸಿಗಳಿಗೆ ತಲೆನೋವಾಗಿದೆ.