ಎನ್.ಆರ್.ಪುರದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮುರಾರ್ಜಿ ದೇಸಾಯಿ ವಸತಿಶಾಲೆ ಪ್ರಾಚಾರ್ಯರು, ಶಿಕ್ಷಕರು ಸಿಬ್ಬಂದಿಯನ್ನು ಗೌರವಿಸಲಾಯಿತು. ಸಂತೋಷ್‌ಕುಮಾರ್, ಪೂರ್ಣೇಶ್, ಜುಬೇದಾ, ಸುಷ್ಮಾ, ಯಡಗೆರೆ ಮಂಜುನಾಥ್ ಇತರರಿದ್ದರು.
- ಮಕ್ಕಳಿಗೆ ರಸಪ್ರಶ್ನೆ
- ಶಿಕ್ಷಕರಿಗೆ ಸನ್ಮಾನ
ಎನ್.ಆರ್.ಪುರ: ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ದೊಡ್ಡ ನಗರವಾಗಿ ಬೆಳೆದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಹೇಳಿದರು.
ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ, ಮಕ್ಕಳಿಗೆ ರಸಪ್ರಶ್ನೆ, ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ರಸ ಪ್ರಶ್ನೆಯಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು. ಮುಂದಾಲೋಚನೆಯಿಂದ ಬೆಂಗಳೂರು ನಗರ ಕಟ್ಟಿರುವುದರಿಂದ 1 ಕೋಟಿ ಜನರಿಗೆ ನೀರು, ವಸತಿ ಸೌಕರ್ಯ ಕಲ್ಪಿಸಲು ಅನುಕೂಲವಾಗಿದೆ. ಮಕ್ಕಳು ದಿನಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಜ್ಞಾನ, ಕೌಶಲ ಬೆಳೆಯಲಿದೆ ಎಂದರು.
ಸಮಾಜ ಸೇವಕಿ ಜುಬೇದಾ ಮಾತನಾಡಿ, ಕೆಂಪೇಗೌಡರು ಕಸುಬಿಗೆ ತಕ್ಕ ಹಾಗೆ ಪೇಟೆಗಳನ್ನು ನಿರ್ಮಿಸಿದ್ದರು. ದೇಶದ ಬೇರೆ ನಗರಗಳಿಗಿಂತ ಬೆಂಗಳೂರಿನಲ್ಲೇ ಐಟಿ, ಬಿಟಿ ಕಂಪನಿಗಳು ಹೆಚ್ಚಾಗಿ ನೆಲೆಸಿವೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕೆಂಪೇಗೌಡರು ಬೆಂದಕಾಳೂರು ಎಂಬ ಹಳ್ಳಿಯನ್ನು ಬೆಂಗಳೂರು ನಗರವನ್ನಾಗಿ ಮಾಡಿದ್ದರಿಂದ 516 ವರ್ಷವಾದರೂ ಕೆಂಪೇಗೌಡ ಅವರ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ. ಕೆಂಪೇಗೌಡರ ದೂರದೃಷ್ಟಿಯನ್ನು ನಮ್ಮ ಜನಪ್ರತಿನಿಧಿಗಳು ಮೈಗೂಡಿಸಿಕೊಂಡು ಪ್ರತಿಯೊಂದು ಪಟ್ಟಣ, ನಗರವನ್ನು ಸುಂದರವಾಗಿಸಬೇಕು. ಯಾವುದೇ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸುವಾಗ ಎಲ್ಲ ಸಮುದಾಯದವರೂ ಭಾಗವಹಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ನಾಡಪ್ರಭು ಕೇಂಪೇಗೌಡರ ಆದರ್ಶ ಆಡಳಿತ ಮತ್ತು ಜೀವನ ಚರಿತ್ರೆ ಬಗ್ಗೆ ರಸಪ್ರಶ್ನೆ ನಡೆಯಿತು. ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯರು, ಶಿಕ್ಷಕರು, ಸಿಬ್ಬಂದಿಯನ್ನು ಗೌರವಿಸಲಾಯಿತು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ದ್ವಾರಮಕ್ಕಿ ಸತೀಶ್, ಮುರಾರ್ಜಿ ದೇಸಾಯಿ ವಸತಿಶಾಲೆ ಪ್ರಾಚಾರ್ಯೆ ಪೂರ್ಣಿಮಾ, ಕಸಾಪ ಯುವ ಘಟಕದ ಅಧ್ಯಕ್ಷೆ ಸುಷ್ಮಾ ಗಂಗಾಧರ್, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್, ಶಿಕ್ಷಕ ರಾಮಮೋಹನ್, ಅಭಿಜ್ಞಾ ಇದ್ದರು.